Index   ವಚನ - 22    Search  
 
ಎಲೆ ದೇವಾ, ಏತಕ್ಕೆ ನುಡಿಯೆ ಎನ್ನೊಳು? ನಿನ್ನಯ ಚಿತ್ತವ ನಿಃಕರಿಸಿ ನುಡಿವರೆಂದೆ? ನಿನ್ನಯ ನೋವು ಎನ್ನೊಳು ನೀ ಮಾಡುವ ಮಾಟ ಅನೇಕ. ಕುಟಿಲ ಯೋನಿಯ ಸುತ್ತಿ ಮುತ್ತಿದ ಹರಿತದ ಪಾಶದ ಮಲ ನಿನ್ನಲ್ಲಿ ಅನೇಕರ ಕೊಲುವ ಪಾಶ ಕೈಯಲ್ಲಿ, ಭವ ವೇಷ ಅಂಗದಲ್ಲಿ. ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾ? ನಿನಗದು ನೀತಿ, ರುದ್ರನ ವೇಷಕ್ಕೆ ಸಹಜ. ಅದ ಬಿಟ್ಟಾಡು, ನೀಕರಿಸು. ಉಮಾಪತಿಯ ವೇಷವ ಬಿಟ್ಟು ಸ್ವಯಂಭುವಾಗು. ಅದ ಬಿಟ್ಟು ಇಚ್ಛೆಯಲ್ಲಿ ನಿಂದು, ನಿರ್ಮಾಯ ಮಲನಾಸ್ತಿಯಾಗಿ, ಮುಕುರ ಪ್ರತಿಬಿಂಬಿಸುವಂತೆ ಎನ್ನಿರವು ನಿನ್ನಲ್ಲಿ ತೋರುತ್ತದೆ. ಅದೇಕೆ? ನಿರ್ಮಾಯನಾದ ಕಾರಣ ನಿನ್ನಿರವು ಎನ್ನಲ್ಲಿ ಕೂರ್ತು, ದರ್ಪಣದ ಆಕಾರ ಬೆಳಗಿನಲ್ಲಿ ತೋರುವ ನಿರಾಕಾರ ಎರಡಕ್ಕೂ ರೂಪು ನಿರೂಪು ಉಭಯ ಭಿನ್ನವಿಲ್ಲದಂತೆ. ಎನ್ನಂಗವಂತಿರಲಿ ಮನವ ಒಡಗೂಡಿಕೊ. ಉರದ ಮಾತಿಂಗೆ ಮಾರನ ಕೊಂದ ಮಲತ್ರಯ ದೂರ, ಅನಾಗತ ಸಂಸಿದ್ಧ ಭೋಗಮಯ ನಯನಚರಣವಿರಾಜಿತ, ಜೀಮೂತ ಮೃತ ದಗ್ಧ ಸರ್ವವ್ಯಾಪಕ ನಾಶನ, ಸರ್ವ ಅಂತರ್ಗತ ವಿಮಲತರಂಗ, ಕರುಣಾಬ್ಧಿ ಪೂರ್ಣಚಂದ್ರ ವಿಲಾಸಿತ, ಒಡಗೂಡಿದ ಭಕ್ತರ ಚಿತ್ತದ ಸಾಕಾರ ಪುಂಜವೆ, ಸರ್ವಾತುರಂಗಳ ವಿರೋಧಿ, ಅಜಾತ, ಶಂಭು ಮಾರೇಶ್ವರಾ.