Index   ವಚನ - 1    Search  
 
ಮಾಯೆ ಮಹಾಸಂಚಲವೆಂಬ ಸುಳಿಗಾಳಿಯೊಳು ಸಿಕ್ಕಿದ ತರಗೆಲೆಯಂತೆ, ತಳಹಳಗೊಳ್ಳುತ್ತಿದ್ದಿತೀ ಜಗವೆಲ್ಲವು ಎನಗಿನ್ನೆಂತೊ, ಎನಗಿನ್ನೆಂತಯ್ಯಾ. ಬಲ್ಲೆನೆಂಬವರ ಬಾಯ ಟೊಣೆಯಿತ್ತು ಮಾಯೆ. ಆಗಮಿಕರ ಮೂಗ ಕೊಯ್ಯಿತ್ತು ಮಾಯೆ. ಅನುಭಾವಿಗಳೆಲ್ಲರೂ ಮನವಿಕಾರಕ್ಕೆ ಒಳಗಾದರು. ಅರಿದೆನೆಂಬವರೆಲ್ಲರೂ ಮರಹಿಂಗೆ ಬೀಜವಾದರು. ಬ್ರಹ್ಮಿಗಳೆಲ್ಲರೂ ಹಮ್ಮಿಂದ ಹಗರಣದ ಮರುಳಂಗಳಾದರು ವಿರಕ್ತರೆಲ್ಲರೂ ಯುಕ್ತಿಗೆಟ್ಟು ಭವಮಾಲೆಗೊಳಗಾದರು. ನಿರ್ವಾಣಿಗಳೆಲ್ಲರೂ ಸೆರೆಸಂಕಲೆಗೊಳಗಾದರು. ಯೋಗಿಗಳೆಲ್ಲರೂ ವಿಕಳವೆಂಬ ರೋಗಕ್ಕೆ ಒಳಗಾದರು. ತಪಸಿಗಳೆಲ್ಲರೂ ಕಪಟ ಕಳವಳಕ್ಕೊಳಗಾದರು. ಧ್ಯಾನ ಮೌನ ವ್ರತ ನಿತ್ಯ ನೇಮ ಕರ್ಮ ಕ್ರಿಯೆಗಳು ವಸ್ತುವ ಮರೆದು, ಮಾಯಾಧೂಳಿನೊಳಗೆ ಸಿಕ್ಕಿ ವಿಕಳತೆಗೊಂಡು, ನೆನೆವ ಮನ, ವಾಸಿಸುವ ಘ್ರಾಣ, ನೋಡುವ ನೇತ್ರ, ನುಡಿವ ನಾಲಗೆ, ನಡೆವ ಪಾದದ್ವಯಗಳೆಲ್ಲ ಭ್ರಮೆಗೊಳಗಾಯಿತ್ತಯ್ಯ. ಶಿವಶಿವಾ ಮಹಾದೇವಾ, ಇದೆಲ್ಲಿಯ ಮಾರಿ ಬಂದಿತ್ತಯ್ಯ. ಈ ಜಗವನೆತ್ತಿ ಕೊಂದು ಕೂಗುವ ಮಾರಿಯ ಗೆಲುವವರನಾರೊಬ್ಬರನೂ ಕಾಣೆ. ಎನಗಿನ್ನೆಂತಯ್ಯ, ಎನಗಿನ್ನೆಂತಯ್ಯಾ! ಭಕ್ತಿಜ್ಞಾನವೈರಾಗ್ಯವನಿತ್ತು ಸಲಹಯ್ಯಾ. ಎನ್ನ ಕರಣಂಗಳಿಗೆ ಸಮಸ್ತ ಪ್ರಸಾದವನಿತ್ತು ಸಲಹಯ್ಯಾ, ನಿಃಕಳಂಕ ಚೆನ್ನಮಲ್ಲಿಕಾರ್ಜುನಪ್ರಭುವೆ.