ಅಯ್ಯಾ ಆಚಾರವುಳ್ಳಕಾಂಚೀಪಟ್ಟಣದಲ್ಲಿ
ಒಂದು ಗಂಡುಕತ್ತೆಯು ಸತ್ತುಬಿದ್ದಿರಲು,
ಕತ್ತೆಯಂ ಕೈಲಾಸದ ಪಾಲುಮಾಡಬೇಕೆಂದಿದ್ದರಯ್ಯಾ,
ಯಾರ್ಯಾರು ಎಂದರೆ:
ಶೆಟ್ಟಿಗಾದರಿ, ಪೃಥ್ವಿಶೆಟ್ಟಿ, ಕೋರಿಶೆಟ್ಟಿ, ಬಳೇಶೆಟ್ಟಿ,
ನಾಡನಾಲಗೆ, [ಮಿಂಡ]ಗುದ್ದಲಿ, ಬಡವ, ಬೋವಿ
ಇಂತಪ್ಪಎಂಟು ಕಟ್ಟೆಯವರು ಕೂಡಿಕೊಂಡು
ಆ ಕತ್ತೆಯಂ ಮಂಚದ ಮೇಲೆ ಇಟ್ಟುಕೊಂಡು
ಕಮ್ಮೆಣ್ಣೆ, ಕಸ್ತೂರಿ, ಗಂಧ, ಪುನುಗು, ಜವ್ವಾಜಿ,
ಬುಕ್ಕಹಿಟ್ಟು, ಊದಿನಕಡ್ಡಿ - ಇಂತಪ್ಪ ಅಷ್ಟಗಂಧದಿಂದ
ಮೇಳ ಭಜಂತ್ರಿಯಿಂದ ಒಯ್ದು,ನರಿ ಪಾಲು ಮಾಡಿ ಬಂದರಯ್ಯಾ.
ಛೇ, ಛೇ ಎಂದು ಕಣ್ಣಯ್ಯಗಳ ಎಡದ ಪಾದರಕ್ಷೆಯಂ ತೆಗೆದುಕೊಂಡು
ಅವರ ಮುದ್ದುಮುಖದ ಮೇಲೆ
ಕುಟ್ಟಿದಾತನೆ ನಮ್ಮ ಅಂಬಿಗರ ಚೌಡಯ್ಯನೆಂಬೊ ಶಿವಶರಣನು.
Art
Manuscript
Music
Courtesy:
Transliteration
Ayyā ācāravuḷḷakān̄cīpaṭṭaṇadalli
ondu gaṇḍukatteyu sattubiddiralu,
katteyaṁ kailāsada pālumāḍabēkendiddarayyā,
yāryāru endare:
Śeṭṭigādari, pr̥thviśeṭṭi, kōriśeṭṭi, baḷēśeṭṭi,
nāḍanālage, [miṇḍa]guddali, baḍava, bōvi
intappa'eṇṭu kaṭṭeyavaru kūḍikoṇḍu
ā katteyaṁ man̄cada mēle iṭṭukoṇḍu
kam'meṇṇe, kastūri, gandha, punugu, javvāji,
Bukkahiṭṭu, ūdinakaḍḍi - intappa aṣṭagandhadinda
mēḷa bhajantriyinda oydu,nari pālu māḍi bandarayyā.
Chē, chē endu kaṇṇayyagaḷa eḍada pādarakṣeyaṁ tegedukoṇḍu
avara muddumukhada mēle
kuṭṭidātane nam'ma ambigara cauḍayyanembo śivaśaraṇanu.