Index   ವಚನ - 111    Search  
 
ಕೇಳಿರಯ್ಯಾ ಮಾನವರೆ, ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ. ಗಂಡ ಹೆಂಡಿರ ಮನಸ್ಸು ಬೇರಾದರೆ ಗಂಜಳದೊಳಗೆ ಹಂದಿ ಹೊರಳಾಡಿ ಒಂದರ ಮೇಲೆ ಒಂದು ಬಂದು ಮೂಸಿದ ಹಾಗೆ. ಛೇ, ಛೇ, ಇದು ಭಕ್ತಿಯಲ್ಲಣ್ಣ. ಅದೇನು ಕಾರಣವೆಂದೊಡೆ, ಕಾಶಿಗೆ ಹೋದೆನೆಂಬವರು ಹೇಸಿ ತೊತ್ತಿನ ಮಕ್ಕಳಯ್ಯ. ಮೈಲಾರಕ್ಕೆ ಹೋದೆನೆಂಬವರು ಮಾದಗಿತ್ತಿಯ ಮಕ್ಕಳಯ್ಯ. ಪರ್ವತಕ್ಕೆ ಹೋದೆನೆಂಬವರು ಹಾದರಗಿತ್ತಿಯ ಮಕ್ಕಳಯ್ಯ. ರಾಚೋಟಿಗೆ ಹೋದೆನೆಂಬವರು ಲಜ್ಜೆಮಾರಿ ತೊತ್ತಿನ ಮಕ್ಕಳಯ್ಯ. ಛೇ, ಛೇ, ಇದು ಭಕ್ತಿಯಲ್ಲವಯ್ಯ. ಅದೆಂತೆಂದೊಡೆ; ಪರಬ್ರಹ್ಮ ಮೂರುತಿಯಾದ ಪರಶಿವನೆ ಗುರುನಾಮದಿಂ ಬಂದು ಇಷ್ಟಲಿಂಗವ ಧರಿಸಿ, ಪಂಚಾಕ್ಷರಿಯ ಬೋಧಿಸಿದ ಮೇಲೆ ಆ ಭಕ್ತನ ಕಾಯವೇ ಕೈಲಾಸ. ಅವನ ಒಡಲೆ ಸೇತುಬಂಧ ರಾಮೇಶ್ವರ. ಅವನ ಶಿರವೆ ಶ್ರೀಶೈಲ. ಆತ ಮಾಡುವ ಆಚಾರವೆ ಪಂಚಪರುಷ. ಇದು ತಿಳಿಯದೆ ಶಾಸ್ತ್ರದಿಂದ ಕೇಳಿ, ಅರಿಯದೆ ಮಂದಬುದ್ಧಿಯಿಂದ ಪರ್ವತಕ್ಕೆ ಹೋಗಿ ಪಾತಾಳಗಂಗೆಯಲ್ಲಿ ಮುಳುಮುಳುಗೆದ್ದರೆ, ಛೇ, ಛೇ, ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ, ನಿನ್ನ ಪಾಪವು ಹೋಗಲಿಲ್ಲವು. ಅಲ್ಲಿಂದ ಕಡೆಗೆ ಬಂದು, ಕೆಟ್ಟ ಕತ್ತಿಯ ಕೊಂಡು ಕೆರವಿನಟ್ಟೆಯ ಮೇಲೆ ಮಸೆದು ಮಸ್ತಕವ ತೋಯಿಸಿ ತಲೆಯ ಬೋಳಿಸಿಕೊಂಡರೆ, ನಿನ್ನ ತಲೆಯ ತಿಂಡಿ ಹೋಯಿತಲ್ಲದೆ ನಿನ್ನ ಪಾಪವು ಬಿಡಲಿಲ್ಲವಯ್ಯ! ಅಲ್ಲಿಂದ ಕೋಲುಬುಟ್ಟಿಯ ತೆಗೆದುಕೊಂಡು ಬರುವಂತಹ ದಿಂಡೆತೊತ್ತಿನ ಮಕ್ಕಳ ಕಣ್ಣಲ್ಲಿ ಕಂಡು, ಪಡಿಹಾರಿ ಉತ್ತಣ್ಣನ ಎಡದ ಪಾದ ಎಕ್ಕಡದಿಂದೆ ಪಟಪಟನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.