Index   ವಚನ - 112    Search  
 
ಕೇಳು ನೀನೆಲೊ ಮಾನವಾ, ಸೋಮವಾರ ಅಮಾವಾಸ್ಯೆ ಹುಣ್ಣಿಮೆ ಎಂಬ ದೊಡ್ಡ ಹಬ್ಬಗಳು ಬಂದಿಹವೆಂದು ಮನೆಯ ಸಾರಿಸಿ, ರಂಗವೋಲೆಯನಿಕ್ಕಿ, ಆಸನವ ಬಲಿದು, ಪತ್ರೆ ಪುಷ್ಪ ಮೊದಲಾದ ಅನಂತ ಸೌರಂಭವ ಸವರಿಸಿ, ವಿರಕ್ತನ ಕರೆತಂದು ಪೂಜೆಯ ಮಾಡುವುದಕ್ಕಿಂತಲೂ ಹೊರೆಯಲ್ಲಿ ಚರಿಸಾಡುವ ಕಾಳ ಶುನಕನ ತಂದು ಆ ಗದ್ದುಗೆಯಲ್ಲಿ ಪೂಜೆ ಮಾಡುವುದು ಮಹಾ ಲೇಸಯ್ಯಾ. ಅದೇನು ಕಾರಣವೆಂದರೆ: ಆಣವಮಲ ಮಾಯಾಮಲ ಕಾರ್ಮಿಕಮಲಕ್ಕೆ ಹೊರತೆಂದು, ಅಷ್ಟಮದ ವಿರಹಿತನೆಂದು, ಷಡ್ಗುಣವ ಸಂಹರಿಸಿದವನೆಂದು, ಶಾಸ್ತ್ರದಲ್ಲಿ ಸಂಪನ್ನನೆಂದು, ಕ್ರಿಯೆಯಲ್ಲಿ ವೀರಶೈವನೆಂದು, ನಿರಾಭಾರಿಯೆಂದು, ಬಾಯಿಲೆ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು, ಮಾನ್ಯವ ಸಂಪಾದಿಸಿಕೊಂಡು, ಅಶನಕ್ಕಾಶ್ರಯನಾಗಿ, ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡಿ, ಸರ್ವವು ಎನಗೆ ಬೇಕೆಂದು ತಮೋಗುಣದಿಂದ ದ್ರವ್ಯವ ಕೂಡಿಸಿ ವಿರತಿಸ್ಥಲವು ಹೆಚ್ಚೆಂದು ಕಾವಿಯ ಹೊದೆದು, ಕೌಪೀನವ ಕಟ್ಟಿ, ವೇಷ ಡಂಭಕದಿಂದ ತಿರುಗುವ ಭ್ರಷ್ಟರ ಮುಖವ ನೋಡಲಾಗದು. ಇಂತಪ್ಪ ವಿರತರ ಪೂಜೆಯ ಮಾಡುವುದಕ್ಕಿಂತಲೂ ಕರೇನಾಯಿಯ ತಂದು ಪೂಜೆಯ ಮಾಡುವುದು ಮಹಾ ಲೇಸು ಕಂಡಯ್ಯ. ಪಂಚಾಮೃತವ ಮುಂದಿಟ್ಟರೆ ಕಣ್ಣು ನೋಡುವುದು, ದ್ರವ್ಯ ಮುಂದಿಟ್ಟರೆ ಕೈಯು ಮುಟ್ಟುವುದು, ಎಂದು ಪೇಳುವ ವಿರತರ ನಾಲಗೆಯು ಆ ನಾಯ ಬಾಲಕ್ಕಿಂತಲು ಕರ ಕಷ್ಟವು. ಇಂತಹ ವಿರತರ ಪೂಜೆಯ ಮಾಡುವಾತನು, ಆ ಜಂಗಮವು ಉಭಯತರ ಮೂಗು ಸವರಿ ಕತ್ತೆಯನೇರಿಸಿ ಪಡಿಹಾರಿಕೆಗಳ ಪಾದುಕೆಯಿಂದ ಪಡಪಡ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.