Index   ವಚನ - 129    Search  
 
ಜಂಗಮದ ಪಾದತೀರ್ಥ ಎನ್ನಂಗದೋಷವ ಕಳೆಯಿತ್ತಯ್ಯ, ಜಂಗಮದ ಪಾದತೀರ್ಥ ಎನ್ನ ಲಿಂಗಕ್ಕೆ ಪ್ರಾಣಪ್ರತಿಷ್ಠೆಯಾಯಿತ್ತಯ್ಯ, ಜಂಗಮದ ಪಾದತೀರ್ಥ ಸಂಗನ ಶರಣರಿಗೆ ಮುಕ್ತಿಯ ಪಥವ ತೋರಿತ್ತಯ್ಯ. ಇಂತಪ್ಪ ಜಂಗಮದ ಪಾದತೀರ್ಥಕ್ಕೆ ಎಂತಪ್ಪ ಹಿರಿಯರಾದರು ತಮ್ಮ ಗರುವಿಕೆಯ ಬಿಟ್ಟು, ದೀರ್ಘದಂಡಪ್ರಣಾಮಂಗೆಯ್ದು ನಮಸ್ಕರಿಸಿ,ಸಾಕ್ಷಿ- ಉತ್ತಮಂ ದೀರ್ಘದಂಡಂ ಚ ಮಧ್ಯಮಂ ಶಿರೋ ವಂದನಂ| ಕನಿಷ್ಟಂ ಕರ [ಮೇಲನಂ] ವಾಗ್ವಂದನಂ ಮಹಾ [ಧಮಂ]ಎಂಬುದಾಗಿ ಜಂಘೆಯಿಕ್ಕಿ ನಡದುಬಂದು ಕೊಂಡಡೆ ಕಂಗಳ ಮೂರುಳ್ಳ ದೇವನೆಂಬೆ,ಹಿರಿಯ ಮಹೇಶ್ವರನೆಂಬೆ. ಹಾಂಗಲ್ಲದೆ ಕಂಗಳು ಹೋದ ಅಂಧಕನಂತೆ, ಕಾಲಿಲ್ಲದ ಪಂಗುಳನಂತೆ,ತಾನಿದ್ದಲ್ಲಿಯೇ ಇದ್ದು ಅಯ್ಯಾ ಶರಣಾರ್ಥಿಯೆಂದು ಇದ್ದೆಡೆಗೆ ಕರಿಸಿಕೊಂಡು, ಅಂಗಯ್ಯಾಂತುಕೊಂಬ ಚೆಂಗಿಮೂಳ ಹೊಲೆಯರ ಕಂಡಡೆ ನೆತ್ತಿಯ ಮೇಲೆ ಚೊಂಗ ಚೊಂಗನೆ ಹೊಡಿ, ಒದ್ದೊದ್ದು ತುಳಿಯೆಂದು [ಹೇಳಿ] ದಾತನಂಬಿಗರ ಚೌಡಯ್ಯ.