ನಮಗೊಬ್ಬರೆಂಜಲು ಸೇರದೆಂದು,
ಶುಚಿತನದಲ್ಲಿ ಬದುಕುತ್ತೈ[ದೇ]ನೆ
ಎಂದುಯೆಂಬ ಬರಿಯ ಮಾತಿನ ರಂಜಕರು
ನೀವು ಕೇಳಿರೋ ಅಣ್ಣಗಳಿರಾ:
ನೀವು ತಂದು ಕುಡಿವ ನೀರು ಜಲಚರದೆಂಜಲು,
ಮೃಗಪಶುಪಕ್ಷಿಯ ಎಂಜಲು.
ಭಾವಿಗೆ ಹೋಗಿ ಕೈಕಾಲು ತೊಳೆದು
ಬಾಯಿ ಮುಕ್ಕಳಿಸುವಲ್ಲಿ ಮಾನವರೆಂಜಲು.
ಇಂತೀ ಹಲವೆಂಜಲ ಬೆರಸಿದ
ಆ ಎಂಜಲ ತಿಂದು ಬೆಳೆದು, ಬೆ[ಳೆ]ಸಿದ
ಆ ಎಂಜಲಿಂದ ಬೆಳೆವ ಪದಾರ್ಥಂಗಳು,
ಆ ಎಂಜಲಿಂದಾದ ಪಾಕವನು,
ನಲಿನಲಿದುಂಡು ಕುಡಿವಲ್ಲಿ
ಎಂಜಲು ಹಿಂಗಿದ ಠಾವ ತೋರಿರಣ್ಣಾ!
ಇದ ಬಲ್ಲ ಭಕ್ತರು ಸರ್ವಪದಾರ್ಥಂಗಳನು
ಶಿವಮಂತ್ರದಲೆ ಹಸ್ತಸ್ಪರ್ಶನವ ಮಾಡಿ,
ವಿಭೂತಿಯಿಂದ ಶುದ್ಧಮಾಡಿ,
ಲಿಂಗಕ್ಕೆ ಕೊಟ್ಟು ಕೊಂಬಲ್ಲಿ ಗುರುಪ್ರಸಾದವಾಯಿತ್ತು.
ಇಂತೀ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವ ಕೊಂಬಲ್ಲಿ
ಸರ್ವ ಎಂಜಲ ಹೊಲೆಯುವ ನೀಗಿದ.
ಇದನರಿಯದಿರ್ದಡೆ ಮಿಕ್ಕಿನವರೆಲ್ಲರು
ಹಲವರೆಂಜಲ ಹೊಲೆಯೊಳಗೆ ಮುಳುಗಿ ಉಂಡರೆಂದಾತ
ನಮ್ಮ ಅಂಬಿಗರ ಚೌಡಯ್ಯ.