ಭಕ್ತ ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ:
ಭಕ್ತರು ಜಂಗಮವಿದ್ದೆಡೆಗೆ ಹೋಗಿ, ದೀರ್ಘದಂಡ ನಮಸ್ಕಾರವಂ ಮಾಡಿ,
ವಿಭೂತಿಯಂ ಕೊಟ್ಟು,
ಎಲೆ ದೇವ. ನಿಮ್ಮ ತೊತ್ತುಭೃತ್ಯನೆಂದು
ಕಿಂಕುರ್ವಾಣತೆಯಂ ನುಡಿದು,
ತೀರ್ಥಪ್ರಸಾದವನಿತ್ತು, ರಕ್ಷಿಸಬೇಕೆಂದು ಬಿನ್ನಪವನಿತ್ತು,
ಕೊಂಡು ತನ್ನ ಗೃಹಕ್ಕೆ ಹೋಗಿ
ಸಕಲಪದಾರ್ಥಂಗಳು ಆಯಿತ್ತಾದ ಬಳಿಕ
ಬಂದು ನಮಸ್ಕಾರವಂ ಮಾಡಿ,
ದೇವರಾಯವಾಯಿತ್ತು ಚಿತ್ತೈಸಿಯೆನೆ,
ಒಳಿತೆಂದು ಆ ಜಂಗಮವು
ಆ ಭಕ್ತನೊಡಗೂಡಿ ಗೃಹಕ್ಕೆ ಬಂದು
ಉಲ್ಲಾಸದಿಂ ಆ ಭಕ್ತನು ಪಾದಾರ್ಚನೆಯ ಮಾಡಿ
ಅಗ್ರ ಗದ್ದಿಗೆಯನಿಕ್ಕಿ ಮೂರ್ತಮಾಡಿಸಿ
ಮರಳಿ ದೀರ್ಘದಂಡನಮಸ್ಕಾರಮಂ ಮಾಡಿ
ತೀರ್ಥಪ್ರಸಾದಕ್ಕೆ ನಿರೂಪವೆ ಅಯ್ಯ? ಎಂದು ಎದ್ದು ಬಂದು
ಆ ಜಂಗಮಕ್ಕೆ ನಮಸ್ಕರಿಸಿ ದಿವ್ಯಪಾದಮಂ ಪಿಡಿದು,ಸಾಕ್ಷಿ:
ದೇಶಿಕಂ ಚರಣಾಂಗುಷ್ಠ[ಭಸಿ]ತಂ ಪ್ರಣಾಮಸ್ತಥಾ
ಪಾದಪೂಜಾಮಿಮಾಂ ಕುರ್ಯಾತ್ ಗೋಪ್ಯಂ ಗೋಪ್ಯಂ ವರಾನನೇ
ಎಂದು ವಿಭೂತಿಯಂ ಧರಿಸಿ,
ಪತ್ರಿಪುಷ್ಪಗಳಿಂದ ಪೂಜೆಯಂ ಮಾಡಿ
ತಾಂಬೂಲ ನೆನೆಗಡಲಿ ಮುಖ್ಯವಾದ ಫಲಾಹಾರಂಗಳನರ್ಪಿಸಿ
ಪ್ರದಕ್ಷಿಣವಂ ಮಾಡಿ, ಸ್ತುತಿಸಿ, ನಮಸ್ಕರಿಸಿ
ಹಸ್ತಪರುಶಮಂ ಮಾಡಿಕೊಂಡು,
ಸಕಲಪದಾರ್ಥಂಗ[ಳ] ನೀಡಿ,
ವಿಭೂತಿಯಂ ಮುಂದಿಟ್ಟು ನಮಸ್ಕರಿಸಿ
ಕರವಂ ಮುಗಿದು ನಿಲ್ಲುವುದು ಭಕ್ತನಿಗೆ ಕರ್ತವ್ಯ.
ಇನ್ನು ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ:
ಜಂಗಮವೆ ಪರಾತ್ಪರ, ಜಂಗಮವೆ ಪರವಸ್ತು,
ಇಂತಪ್ಪ ಜಂಗಮ ಭಕ್ತನ ಮೇಲಣ ಕರುಣದಿಂ ತೀರ್ಥವನಿತ್ತ ಬಳಿಕ
ತಮ್ಮಿಷ್ಟಲಿಂಗ[ಕ್ಕೆ] ಕೊಟ್ಟುಕೊಂಬುದೆ ಜಂಗಮಕ್ಕೆ ಕರ್ತವ್ಯ. ಸಾಕ್ಷಿ:
ಜಂಗಮಂ ಪರಾತ್ಪರಂ ಪಾದಾಂಗುಷ್ಠ ತೀರ್ಥಂ ತಥಾ
ಸ್ವಯಂ ಲಿಂಗಾರ್ಪಿತ ಪೀತ್ವಾ ಜಂಗಮಃ ಪರಮೇಶ್ವರಃ
ಮತ್ತಂ
ಸ್ವಪಾದೋದಕ ತೀರ್ಥಾಂ ಚ ಸ್ವಲಿಂಗಸ್ಯ ಸಮರ್ಪ[ಣಂ]
ಕೃತ್ವ್ಯಾವಿಭೇದವದ್ಭಕ್ತ್ಯಾ ಅರ್ಪಣೀಯಮನಂತರಂ
ಇಂತೆಂಬ ಶುತ್ಯರ್ಥವನರಿಯದೆ ಬೇರೆ ತನಗೊಂದೆಡೆಯೆಂದು
ಗೊಣಸೆ ತೆಗೆದುಕೊಂಡು ಎಡೆಮಾಡು ಭಕ್ತಾ
ಎಂಬುದು ಜಂಗಮಕ್ಕೆ ಕ್ರಮವೆ? ಅಲ್ಲ.
ಅದು ಗಣಸಮೇಳಕ್ಕೆ ಅಲ್ಲದ ಮಾತು.
ಆತನ ಮಾತ ಕೇಳಿ ಎಡೆಮಾಡುವಾತ ಭಕ್ತನೆ? ಅಲ್ಲ.
ಇವರಿಬ್ಬರ ಮುಖವ ನೋಡಲಾಗದೆಂದನಂಬಿಗರ ಚೌಡಯ್ಯ.