Index   ವಚನ - 202    Search  
 
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಕೊರಳಿಗೆ ಕವಡೆಯ ಕಟ್ಟಿ ನಾಯಾಗಿ ಬೊಗಳುವರು! ಅದಾವ ವಿಚಾರವಯ್ಯ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಬೇವಿನುಡಿಗೆಯನುಟ್ಟು ಹಡಲಿಗೆಯ ಹೊತ್ತು `ಉಧೋ ಉಧೋʼ ಎಂಬರು! ಅದಾವ ವಿಚಾರವಯ್ಯ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಹಗ್ಗಹುರಿ-ಬೆನ್ನಸಿಡಿ-ಬಾಯಬೀಗದಲ್ಲಿ ಹೋಗುವರು! ಅದಾವ ವಿಚಾರವಯ್ಯ? ಇಂಥ ಭವಿಮಾರ್ಗದಲ್ಲಿ ಚರಿಸುವ ಶಿವದ್ರೋಹಿಗಳಿಗೆ ಲಿಂಗಧಾರಣವ ಮಾಡುವನೊಬ್ಬ ಗುರುದ್ರೋಹಿ, ಅವರಿಗೆ ಚರಣೋದಕವ, ತಾ ಧರಿಸುವ ವಿಭೂತಿ-ರುದ್ರಾಕ್ಷಿಯ ಕೊಡುವನೊಬ್ಬ ಲಿಂಗದ್ರೋಹಿ! ಅವನು ಭಕ್ತನೆಂದು ಅವನ ಮನೆಯ ಹೊಕ್ಕು, ಮಂತ್ರವ ಹೇಳಿ, ಅನ್ನವ ತಿಂದವನೊಬ್ಬ ಜಂಗಮದ್ರೋಹಿ! ಇಂತೀ ನಾಲ್ವರಿಗೆ ಸೂರ್ಯಚಂದ್ರರುಳ್ಳನ್ನಕ್ಕ ಎಕ್ಕಲಕೊಂಡದಲ್ಲಿಕ್ಕದೆ ಮಾಣ್ಬನೆ ಅಂಬಿಗರ ಚೌಡಯ್ಯನು?