Index   ವಚನ - 209    Search  
 
ಮನ ಮಗ್ನವಾಗಿ, ಅರಿವನು ಘನಪ್ರಾಣಲಿಂಗದಲ್ಲಿ ಸವೆದು, ತನುವನು ಕ್ರಿಯಾಚಾರವಿಡಿದು, ಇಷ್ಟಲಿಂಗದಲ್ಲಿ ಸವೆದು, ಮಹಾನುಭಾವವನರಿತಂತಹ ವೀರಶೈವಸಂಪನ್ನರಾದ ಶಿವಶರಣರಿಗೆ ಸಂಸಾರಿಗಳೆನ್ನಬಹುದೆ ಅಯ್ಯ? ಹೊನ್ನು-ಹೆಣ್ಣು-ಮಣ್ಣೆಂಬ ತ್ರಿವಿಧಪದಾರ್ಥಂಗಳ ವಿವರಿಸಿ, ಇಷ್ಟ-ಪ್ರಾಣ-ಭಾವವೆಂಬ ಮೂರು ಲಿಂಗದ ಮುಖವನರಿದರ್ಪಿಸಿ, ಆರು ಲಿಂಗದನುವಿನಲ್ಲಿ ಕೈಕೊಂಡು, ಬಂದ ಬಂದ ಸಕಲಪದಾರ್ಥವನು ಅದರ ಪೂರ್ವಾಶ್ರಯವಳಿದು, ಶಿವಪ್ರಸಾದವೆಂದು ಅನುಭವಿಸುತಿರ್ಪರು. ಅಂತಪ್ಪ ನಿರುಪಮ, ನಿರ್ಭೇದ್ಯ, ನಿರಾಳ, ನಿಃಶೂನ್ಯ ಪರಮಪ್ರಸಾದಿಗಳಿಗೆ ಸಂಸಾರಿಗಳೆಂದು ನುಡಿವ ಅಜ್ಞಾನಿಸಂದೇಹಿಗಳು ಅಘೋರನರಕದಲ್ಲಿ ಮುಳುಗುವರೆಂದಾತನಂಬಿಗರ ಚೌಡಯ್ಯ.