Index   ವಚನ - 275    Search  
 
ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ? ಹೊಲೆಯ ಹೊರಕೇರಿಯಲ್ಲಿರುವನು, ಊರೊಳಗಿಲ್ಲವೆ ಅಯ್ಯಾ, ಹೊಲೆಯರು? ತಾಯಿಗೆ ಬೈದವನೇ ಹೊಲೆಯ, ತಂದೆಗೆ ಉತ್ತರ ಕೊಟ್ಟವನೆ ಹೊಲೆಯ, ತಂದೆಗೆ ಬೈದವನೇ ಹೊಲೆಯ, ಕೊಡುವ ದಾನಕ್ಕೆ ಅಡ್ಡ ಬಂದವನೆ ಹೊಲೆಯ, ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ, ಬ್ರಾಹ್ಮಣನ ಕುತ್ತಿಗೆಯ ಕೊಯ್ದವನೇ ಹೊಲೆಯ, ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ, ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ, ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ, ಲಿಂಗವ ಬಿಟ್ಟು ತಿರುಗುವವನೇ ಹೊಲೆಯ, ಧರ್ಮವ ಮಾಡದವನೇ ಹೊಲೆಯ, ಬಸವನ ಕೊಂದವನೇ ಹೊಲೆಯ, ಬಸವನ ಇರಿದವನೇ ಹೊಲೆಯ, ಲಿಂಗಪೂಜೆಯ ಮಾಡದವನೇ ಹೊಲೆಯ. ಇಂತಪ್ಪ ಹೊಲೆಯರು ಊರ ತುಂಬ ಇರಲಾಗಿ ಹೊರಕೇರಿಯವರಿಗೆ ಹೊಲೆಯರೆನಬಹುದೆ? ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು, ಹಿಪ್ಪೆಯನುಂಡ ತೊಗಲು ಹರಿಗೋಲವಾಯಿತ್ತು. ಗುರುಗಳಿಗೆ ಚಮ್ಮಾವುಗೆಯಾಯಿತ್ತು ಹೂಡಲಿಕ್ಕೆ ಮಿಣಿಯಾಯಿತ್ತು. ಹೊಡೆಯಲಿಕ್ಕೆ ಬಾರುಕೋಲವಾಯಿತ್ತು. ಬಂಡಿಗೆ ಮಿಣಿಯಾಯಿತ್ತು. ಅರಸರಿಗೆ ಮೃದಂಗವಾಯಿತ್ತು. ತೋಲು ನಗಾರಿಯಾಯಿತ್ತು. ತುಪ್ಪ ತುಂಬಲಿಕ್ಕೆ ಸಿದ್ದಲಿಕೆ, ಎಣ್ಣೆ ತುಂಬಲಿಕೆ ಬುದ್ದಲಿಕೆ[ಯಾಯಿತ್ತು]. ಸಿದ್ದಲಿಕೇನ ತುಪ್ಪ, ಬುದ್ದಲಿಕೇನ ಎಣ್ಣೆ ಕಲ್ಲಿಶೆಟ್ಟಿ ಮಲ್ಲಿಶೆಟ್ಟಿಗಳು ಕೂಡಿ, ನಾ ಶೀಲವಂತ ತಾ ಶೀಲವಂತ ಎಂದು ಶುದ್ದೈಸಿಕೊಂಡು ತಿಂದು ಬಂದು, ಜಗಳ ಬಂದಾಗ ನನ್ನ ಕುಲ ಹೆಚ್ಚು, ನಿನ್ನ ಕುಲ ಹೆಚ್ಚು ಎಂದು ಬಡಿದಾಡುವ ಕುನ್ನಿ ನಾಯಿಗಳ ಮೋರೆ ಮೋರೆಯ ಮೇಲೆ ನಮ್ಮ ಪಡಿಹಾರಿ ಉತ್ತಣ್ಣಗಳ ವಾಮಪಾದುಕೆಯ ಕೊಂಡು ಅವರ ಅಂಗುಳ ಮೆಟ್ಟಿ ಫಡಫಡನೆ ಹೊಡಿ ಎಂದಾತ ನಮ್ಮ ದಿಟ್ಟ ಅಂಬಿಗರ ಚೌಡಯ್ಯ ನಿಜಶರಣನು.