ಆರರ ಅಂತ್ಯವು ಮೂರರ ಅಂತ್ಯವು ಒಂದೆ,
ಭಾವ ಅವು ಆವಾವವಯ್ಯ ಎಂದಡೆ:
ಕಕ್ಷೆ, ಕಂಠ, ಕರಸ್ಥಲ, ಉರಸಜ್ಜೆ, ಉತ್ತಮಾಂಗ, ಅಮಳೋಕ್ಯ
ಇಂತೀ ಆರು ಸ್ಥಾನ ಬಾಹ್ಯವೆಂಬೆ.
ನಾಸಿಕಾಗ್ರ, ಭೂಮಧ್ಯ, ಬ್ರಹ್ಮರಂಧ್ರ
ಇಂತೀ ಮೂರರ ತೂಯ ಚೌಕಮಧ್ಯವೆನಿಸುವದು.
ಅದರ ಕ್ರಮವೆಂತೆಂದಡೆ:
ಇಂತೀ ಮೂರು ಸ್ಥಾನದ ಮೇಲಣ
ಸಹಸ್ರದಳಕಮಲದೊಳಗೆ ತೋರುವ
ನಾಲ್ಕು ಕೋಣೆಯ ಚೌಕಮಧ್ಯ
ಅದರೊಳಗಿಪ್ಪ ಅಮೃತಮಯಲಿಂಗವ ಕಂಡು
ನೋಡುತ್ತ ನೋಡುತ್ತ ನಿಬ್ಬೆರಗಾದ ನಿಜಗುಣಾ.