Index   ವಚನ - 1    Search  
 
ಏಕೋದೇವ ಶಿವನದ್ವಿತೀಯ. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಿ ನುಡಿವುತ್ತಿ[ವೆ], ಶ್ರುತಿ ಶಾಸ್ತ್ರ ಪುರಾಣ ಆಗಮಂಗಳೆಲ್ಲವು. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಲು, ಮರಳಿ ವಿಷ್ಣು ದೇವರೆಂದು ನುಡಿವುತ್ತಿಪ್ಪರು. ದೈವಕ್ಕೆ ಉತ್ಪತ್ತಿ ಸ್ಥಿತಿ ಲಯಂಗಳೆಂಬುದುಂಟೆ. ದೃಷ್ಟಾಂತರ ಜಾಯತೆ ಅಷ್ಟಮಿ ಸಾಕ್ಷಿ. ಆ ವಿಷ್ಣುವಿಂಗೆ ಲಯವುಂಟೆಂಬುದಕ್ಕೆ ಕಾಡಬೇಡನೆಚ್ಚಂಬು ಅಂಗಾಲಲ್ಲಿ ನೆಟ್ಟು ಪ್ರಾಣವ ಬಿಟ್ಟುದೇ ಸಾಕ್ಷಿ. ಅಚ್ಯುತಂಗೆ ಅನೇಕ ಭವವುಂಟೆಂಬುದಕ್ಕೆ ಮತ್ಸ್ಯ ಕೂರ್ಮ ವರಾಹವತಾರವಾದುದೇ ಸಾಕ್ಷಿ. ಆ ಹರಿ, ಹರನ ಭೃತ್ಯನೆಂಬುದಕ್ಕೆ ರಾಮೇಶ್ವರ ಆದಿಯಾದ ಪ್ರತಷ್ಠೆಗಳೇ ಸಾಕ್ಷಿ. ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವರು ಅಜ್ಞಾನಿಗಳು. ಆತಂಗಿಲ್ಲದ ಮಹತ್ವದ ತಾವು ನುಡಿವುತ್ತಿಹರು. ಬಲಿಯ ಮೂರಡಿ ಭೂಮಿಯ ಸ್ಥಾನವ ಬೇಡಿದಲ್ಲಿ ಪಂಚಾಶತಕೋಟಿ ಭೂಮಿ ಸಾಲದೆ ಹೋಯಿತೆಂದು ನುಡಿವುತ್ತಿಹರು. ಮಗಧನೆಂಬ ರಾಕ್ಷಸನನಟ್ಟುವಲ್ಲಿ ಅದೆಲ್ಲಿ ಬಂದಿತೊ, ಓಡುವುದಕ್ಕೆ ಭೂಮಿ. ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲಾ ಇದ್ದೀತೆಂದು ನುಡಿವುತ್ತಿಹರು. ಆ ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲವು ಇದ್ದರೆ, ಸೀತೆ ಹೋದಳೆಂದು ಅರಸಿ ಸೇತುವೆ ಕಟ್ಟಿ ದಣಿಯಲೇಕೊ. ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವೂ ಬಂದವೆಂದು ನುಡಿವುತ್ತಿಹರು. ಆ ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವು ಬಂದರೆ, ಕಪಿಗಳ ಕೂಡಿ ಸೇತುವೆ ಕಟ್ಟುವುದಕ್ಕೇನು ಕಾರಣ. ಇಂತಪ್ಪ ಹರಿಯನು ಹರಗೆ ಸರಿಯೆಂದು ನುಡಿವ ದ್ವಿಜರ ನುಡಿಯನು ಪ್ರಮಾಣಿಸಿದರೆ, ಅಘೋರ ನರಕದಲ್ಲಿ ಇಕ್ಕದೆ ಮಾಣ ನಿಜಗುರು ಶಾಂತಮಲ್ಲಿಕಾರ್ಜುನ.