Index   ವಚನ - 1    Search  
 
ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾಂಪ್ರದಾಯಕರೆಂದು ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ. ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ. ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ. ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನಂತ ಸೂತಕಪಾತಕಂಗಳೊಳಗೆ ಮುಳುಗಾಡಿ ಮತಿಗೆಟ್ಟು ಪಂಚಾಂಗವ ಬೊಗಳುವ ಭ್ರಷ್ಟ ಮಾದಿಗರ ಮಾತು ಅಂತಿರಲಿ. ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು? ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ? ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ? ಪಂಚಾಂಗ ಕೇಳಿದ ಇಂದ್ರನ ಶರೀರವೆಲ್ಲ ಯೋನಿಮಂಡಲವೇಕಾಯಿತು? ಪಂಚಾಂಗ ಕೇಳಿದ ದ್ವಾರಾವತಿ ಪಟ್ಟಣದ ನಾರಾಯಣನ ಹೆಂಡಿರು ಹೊಲೆಮಾದಿಗರನ್ನು ಕೂಡಿದರೇಕೆ? ಪಂಚಾಂಗ ಕೇಳಿದ ಸರಸ್ವತಿಯ ಮೂಗು ಹೋಯಿತೇಕೆ? ಪಂಚಾಂಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ? ಪಂಚಾಂಗ ಕೇಳಿದ ಬ್ರಹ್ಮ ವಿಷ್ಣು ಇಂದ್ರ ಮೊದಲಾದ ಮೂವತ್ತುಮೂರುಕೋಟಿ ದೇವರ್ಕಳು ತಾರಕಾಸುರನಿಂದ ಬಾಧೆಯಾಗಿ ಕಂಗೆಟ್ಟು ಶಿವನ ಮೊರೆಯ ಹೊಕ್ಕರೇಕೆ? ಕುರುಡ ಕುಂಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು. ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂರ್ತ ವ್ಯತಿಪಾತ ದಗ್ಧವಾರವೆಂದು ಸಂಕಲ್ಪಿಸಿ ಬೊಗಳುವರ ಮಾತ ಕೇಳಲಾಗದು. ಗುರುವಿನಾಜ್ಞೆಯ ಮೀರಿ, ಸತ್ತರೆ ಹೊಲೆ, ಹಡೆದರೆ ಹೊಲೆ, ಮುಟ್ಟಾದರೆ ಹೊಲೆ ಎಂದು ಸಂಕಲ್ಪಿಸಿಕೊಂಬುವಿರಿ. ನಿಮ್ಮ ಮನೆ ಹೊಲೆಯಾದರೆ ನಿಮ್ಮ ಗುರುಕೊಟ್ಟ ಲಿಂಗವೇನಾಯಿತು? ವಿಭೂತಿ ಏನಾಯಿತು? ರುದ್ರಾಕ್ಷಿ ಏನಾಯಿತು? ಮಂತ್ರವೇನಾಯಿತು? ಪಾದೋದಕ ಪ್ರಸಾದವೇನಾಯಿತು? ನಿಮ್ಮ ಶಿವಾಚಾರವೇನಾಯಿತು? ನೀವೇನಾದಿರಿ ಹೇಳಿರಣ್ಣಾ? ಅರಿಯದಿದ್ದರೆ ಕೇಳಿರಣ್ಣಾ. ನಿಮ್ಮ ಲಿಂಗ ಪೀತಲಿಂಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾರ್ಥವೆಲ್ಲ ಹೆಂಡಕಂಡ ಅಶುದ್ಧ ಕಿಲ್ಬಿಷವೆನಿಸಿತ್ತು. ಇದ ಕಂಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯಾದ ಅನಂತ ಜನರ ಹೆಂಡಿರು ಮುಂಡೆಯರಾಗಿ ಹೋದ ದೃಷ್ಟವ ಕಂಡು ಪಂಚಾಂಗವ ಕೇಳಿದವರಿಗೆ ನಾಯಿ ಮಲವ ಹಂದಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.