ಪಂಚಾಂಗ ಪಂಚಾಂಗವೆಂದು ಕಳವಳಗೊಂಡು
ಜೋಯಿಸನ ಕರೆಯಿಸಿ,
ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು,
ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು,
ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ
ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು?
ಪಂಚಾಂಗವೆಂಬ ಶಬ್ದಕ್ಕೆ ಅರ್ಥವ ಹೇಳಲರಿಯದೆ
ಜೋಯಿಸರು ಕೆಟ್ಟರು;
ಕೇಳಲರಿಯದೆ ಅನಂತ ಹಿರಿಯರು ನರಕಕ್ಕೆ ಇಳಿದರು.
ಪಂಚಾಂಗವೆಂದರೆ ಹೇಳಿಹೆ ಕೇಳಿರಣ್ಣಾ.
ಪಂಚ ಅಂದರೆ ಐದು; ಅಂಗವೆಂದರೆ ದೇಹ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ-
ಈ ಐದು ಕೂಡಿ ದೇಹವಾಯಿತ್ತು.
ಆ ದೇಹದೊಳಗೆ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರದಚ್ಚು ಮುರಿಯುವುದೇ ಪಂಚಾಂಗ.
ಸತ್ವ ರಜ ತಮವೆಂಬ ಅಹಂಕಾರವ ತುಳಿವುದೆ ಪಂಚಾಂಗ.
ಆಣವಮಲ ಮಾಯಾಮಲ ಕಾರ್ಮಿಕಮಲವ
ಮುಟ್ಟದಿರುವುದೇ ಪಂಚಾಂಗ.
ತನ್ನ ಸತಿಯ ಸಂಗವಲ್ಲದೆ
ಪರಸತಿಯರ ಮುಟ್ಟದಿರುವುದೇ ಪಂಚಾಂಗ.
ತನ್ನ ಇಷ್ಟಲಿಂಗವಲ್ಲದೆ ಭೂಮಿಯ ಮೇಲೆ ಇಟ್ಟು
ಪೂಜೆಯ ಮಾಡುವ ದೇವರಿಗೆ ಕೈಮುಗಿಯದಿರುವುದೆ ಪಂಚಾಂಗ.
ಜಾತಿಸೂತಕ ಜನನಸೂತಕ ಉಚ್ಫಿಷ್ಟಸೂತಕ
ಮೃತ್ಯುಸೂತಕ ರಜಸ್ಸೂತಕ - ಈ ಪಂಚಸೂತಕವ
ಶರಣರು ಕಳೆವರಾಗಿ, ನಮ್ಮ ಶಿವಭಕ್ತರಿಗೆ ಸಲ್ಲದೆಂಬುದೆ ಪಂಚಾಂಗ.
ಸೂತಕ ನಾಸ್ತಿಯಾದುದೆ ಪಂಚಾಂಗ.
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವೆ ಪಂಚಾಂಗ.
ಲಿಂಗಾಚಾರ ಸದಾಚಾರ ಭೃತ್ಯಾಚಾರ
ಶಿವಾಚಾರ ಗಣಾಚಾರವೆ ಪಂಚಾಂಗ.
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
ಗಣಪ್ರಸಾದ, ಮಹಾಪ್ರಸಾದವ ಕೊಂಬುವುದೆ ಪಂಚಾಂಗ.
ಇಂತೀ ಪಂಚಾಂಗದ ನಿಲವನರಿಯದೆ
ಪಂಚಸೂತಕದೊಳಗೆ ಹೊಡೆದಾಡುವ ಪಂಚಮಹಾಪಾತಕರ
ಎನಗೊಮ್ಮೆ ತೋರದಿರಯ್ಯ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Pan̄cāṅga pan̄cāṅgavendu kaḷavaḷagoṇḍu
jōyisana kareyisi,
kaimugidu kāṇikeyanikki ele aḍikeyaṁ koṭṭu,
jōyisana vākyavu sakala kāryakke sid'dhiyendu,
avana bāya tombulava timba handigaḷirā
etta ballirayyā śivācārada pad'dhatiyanu?
Pan̄cāṅgavemba śabdakke arthava hēḷalariyade
jōyisaru keṭṭaru;
Tanna satiya saṅgavallade
parasatiyara muṭṭadiruvudē pan̄cāṅga.
Tanna iṣṭaliṅgavallade bhūmiya mēle iṭṭu
pūjeya māḍuva dēvarige kaimugiyadiruvude pan̄cāṅga.
Jātisūtaka jananasūtaka ucphiṣṭasūtaka
mr̥tyusūtaka rajas'sūtaka - ī pan̄casūtakava
śaraṇaru kaḷevarāgi, nam'ma śivabhaktarige salladembude pan̄cāṅga.
Sūtaka nāstiyādude pan̄cāṅga.
Guru liṅga jaṅgama pādōdaka prasādave pan̄cāṅga.
Liṅgācāra sadācāra bhr̥tyācāra
Śivācāra gaṇācārave pan̄cāṅga.
Guruprasāda, liṅgaprasāda, jaṅgamaprasāda,
gaṇaprasāda, mahāprasādava kombuvude pan̄cāṅga.
Intī pan̄cāṅgada nilavanariyade
pan̄casūtakadoḷage hoḍedāḍuva pan̄camahāpātakara
enagom'me tōradirayya
nis'saṅga nirāḷa nijaliṅgaprabhuve.