Index   ವಚನ - 5    Search  
 
ಲಿಂಗಾಚಾರ ಸದಾಚಾರ ಶಿವಾಚಾರ ಲಿಂಗಾಚಾರ ಗಣಾಚಾರ ಭೃತ್ಯಾಚಾರದೊಳಗಿರಬಲ್ಲರೆ ಪಂಚಾಂಗ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಶಿವಮಂತ್ರವೆಂಬ ಅಷ್ಟಾವರಣವೆ ಅಂಗವೆಂದು ನಂಬುವುದೇ ಪಂಚಾಂಗ. ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರಂಗದಲ್ಲಿ ಇಷ್ಟ ಪ್ರಾಣ ಭಾವವು ಸಂಬಂಧವಾದುದೆ ಪಂಚಾಂಗ. ಅಂಗದ ಮೇಲೆ ಶಿವಲಿಂಗವಿಲ್ಲದ ವಿಪ್ರ ಶೂದ್ರ ಜಾತಿಯಲ್ಲಿ ಸ್ನೇಹ ಸಮರಸ ವಿಶ್ವಾಸ ಸಂಭಾಷಣೆ ಬಿಡುಗಡೆಯಾದುದೆ ಪಂಚಾಂಗ. ಈ ಪಂಚಾಂಗದಲ್ಲಿ ಇರಲೊಲ್ಲದೆ ಬೆಟ್ಟದ ಮೇಲೆ ಪಕ್ಷಿ ಕೆಡಿಸಿ ಜಾರಬಿಟ್ಟಂತೆ, ಮಣ್ಣ ಮಟ್ಟಿ ನೀರಲ್ಲಿ ಕಲೆಸಿ, ಅದ ಭೂಜ ಘಣೆಗೆ ಜಾರಬಿಟ್ಟು, ದ್ವಾದಶಪ್ರಮಾಣದ ಪಂಚಾಂಗ ಕೈಯಲ್ಲಿ ಹಿಡಿದು ಸರ್ವಶುಭಮುಹೂರ್ತ ಹೇಳುವನ ಬಾಯ ತೊಂಬುಲವ ತಿಂಬ ಹಂದಿಗಳೆತ್ತ ಬಲ್ಲರಯ್ಯ ಶಿವಪಥದ ಪಂಚಾಂಗವ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ?