Index   ವಚನ - 1    Search  
 
ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ, ಧರ್ಮಾರ್ಥಕಾಮಮೋಕ್ಷಂಗಳೆಂಬ ಉಕ್ಕಡದವರೆಚ್ಚತ್ತಿರಿ! ಎಚ್ಚತ್ತಿರಿ! ಭಯ ಘನ! ಭಯ ಘನ! ಅಜ್ಞಾನವೆಂಬ ತೀವ್ರ ಕತ್ತಲೆ ಕರ ಘನ! ಕರ ಘನ! ಒಂಬತ್ತು ಬಾಗಿಲ ಜತನವ ಮಾಡಿ! ಜತನವ ಮಾಡಿ! ಜ್ಞಾನಜ್ಯೋತಿಯ ಪ್ರಬಲವ ಮಾಡಿ! ಪ್ರಬಲವ ಮಾಡಿ! ಐವರು ಕಳ್ಳರು ಕನ್ನವ ಕೊರೆವುತೈದಾರೆ. ಸುವಿಧಾನವಾಗಿರಿ! ಸುವಿಧಾನವಾಗಿರಿ! ಜೀವಧನವ ಜತನವ ಮಾಡಿ! ಜತನವ ಮಾಡಿ! ಭಳಿರೆಲಾ! ಭಳಿರೆಲಾ! ಆ ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ ಬಾಗಿಲ ತೆರೆದು, ನಡೆವುದೆ ಸುಪಥ ಸ್ವಯಂಭುನಾಥನಲ್ಲಿಗೆ. ಇದನರಿತು, ಮಾಹಮಹಿಮ ಮಾಗುಡದ ಮಲ್ಲಿಕಾರ್ಜುನದೇವರಲ್ಲಿ ಎಚ್ಚರಿಕೆಗುಂದದಿರಿ! ಎಚ್ಚರಿಕೆಗುಂದದಿರಿ!