ಕರ್ಮಕಾಂಡಿ[ಗಳಿ]ಗೆ ಕತ್ತಲೆಕರ್ಮಿಗಳೆಂದು
ನುಡಿವರು ನೋಡಾ.
ಅವರು ಮಾಯಾಮೋಹಕ್ಕೆ ಸಿಲ್ಕಿ
ಕೆಟ್ಟರು ಕಾಣಾ ಎಂದು ನುಡಿವರು ಕೇಳಾ.
ಸಗುಣಸ್ಥಲದ ಮನೋಜ್ಞಾನಿಗಳವರು
ಕೆಟ್ಟಂತೆ ನಾವು ಕೆಡಬಾರದು.
ತಮ್ಮ ಮನಕ್ಕೆ ಬುದ್ಧಿಯಂ ಕೊಟ್ಟು
ಆಸೆಯಂ ಬಿಟ್ಟು ತನುವೆಂಬ ಬಿಲ್ಲಿಗೆ
ಮನವೆಂಬ [ಹೆದೆ]ಯನೇರಿಸಿ,
ಉರಿನರಿಯಂಬ ಅಳವಡಿಸಿ
ವಾರಿ ಮೋರೆಯನೆ ತಿದ್ದಿಕೊಂಡು
ಗುರುಕೊಟ್ಟ ಬಿಲ್ಲ ದೃಢವಾಗಿ ಹಿಡಿದು
ಶ್ರೀಗಿರಿಯೆಂಬ ಗುರಿಯ ನೋಡಿ ಎಸೆವಾಗ,
ಭವ ಹರಿಯಿತ್ತು, ಕಾಲಕರ್ಮವೆಂಬ ಶಿರ ಹರಿಯಿತ್ತು.
ಅರಸು ಪ್ರಧಾನಿ ಪ್ರಜೆ ಪರಿವಾರ ಓಡಿ ಹೋಯಿತ್ತು.
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಅಂದೇ ಬೆಳಗಾಯಿತ್ತು.
ಇಂತಪ್ಪ ಪ್ರಸಾದ ಆ ಗುರು ಲಿಂಗ ಜಂಗಮ ತಮ್ಮೊಳಗಾಯಿತ್ತು.
ಇಂತಪ್ಪ ಪ್ರಸಾದವು ಯಾರಿಗೂ ಅಳವಡದು.
ಪ್ರಭುವಿನೊಳ್ ಐಕ್ಯವಾದ ಬಸವಸಂಪತ್ತಿಗಲ್ಲದೆ
ಮಿಕ್ಕ ಪ್ರಪಂಚಿಗಳಿಗೆ ಅಳವಡದೆಂದು ಹೇಳುವ
ಸಗುಣದ ಭ್ರಮಿತರು ಅವರು
ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ ನೋಡಾ.
ಮುಂದೆ ಇಷ್ಟವ ಕಂಡು ಮುಳುಗಿದವರಿಗೆ
ಮುಕ್ತಿ ಎಂದೆಂದಿಗೂ ಇಲ್ಲ ಕಾಣಾ.
ಇನ್ನು ಕೈವಲ್ಯಾನ್ವಯ ಪ್ರವರ್ತಕ
ನಿಸ್ಸೀಮಾಂಬುಧಿ ನಿರ್ಲೇಪ ತಾನಾದಂಥ ದೇವ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.