Index   ವಚನ - 50    Search  
 
ನಾನಾ ವರ್ಣಕ್ಕೆ ಶ್ವೇತಾಂಗ ಅಂಗವಾಗಿ ಮಿಕ್ಕಾದ ವರ್ಣಂಗಳಿಗೆ ಇಂಬುಗೊಟ್ಟಂತೆ. ಐಕ್ಯಸ್ಥಲ ಆದಿಯಾಗಿ, ಶರಣಸ್ಥಲ ಸಂಬಂಧಿಯಾಗಿ ಪ್ರಾಣಲಿಂಗಿಸ್ಥಲ ಏಕವಾಗಿ, ಪ್ರಸಾದಿಸ್ಥಲ ಪರಿಪೂರ್ಣವಾಗಿ ಮಾಹೇಶ್ವರಸ್ಥಲ ಮಾಯಾಮಲಂ ನಾಸ್ತಿಯಾಗಿ ಭಕ್ತಿಸ್ಥಲ ಸರ್ವಗುಣಸಂಪನ್ನವಾಗಿ ಅಳಿವು ಉಳಿವು ಗರ್ಭಾಂತರವನರಿತು ನೋಡನೋಡ ಮಹದೊಡಲಿಕ್ಕೆ ರಂಜನೆ ಬಿಸಿಲೊಳಗಡಗಿ, ಬಿಸಿಲು ರಂಜನೆಯ ನುಂಗಿ ಉತ್ತರ ಪೂರ್ವವ ಹೊತ್ತಾಡಿ, ಪೂರ್ವ ಉತ್ತರದಲ್ಲಿ ನಿಶ್ಚಯವಾಗಿ ಬೆಸುಗೆ ಕಲೆದೋರದೆ ಉಭಯಚಕ್ಷು ಏಕರೂಪವಾಗಿ ಲಕ್ಷಿಸಿ ನಿರ್ಧರವೆಂದಲ್ಲಿ ಗುರಿಯನೆಚ್ಚ ಕರ ಅಹುದಲ್ಲಾ ಎಂಬುದನರಿದಂತೆ ಕ್ರೀಯಲ್ಲಿ ಮಾರ್ಗ, ಜ್ಞಾನದಲ್ಲಿ ನಿಶ್ಚಯ ಇಂತಿವನರಿದು ಅರುಹಿಸಿಕೊಂಬ ಭೇದ. ಕರ್ತೃಭೃತ್ಯಸಂಬಂಧ ವಸ್ತು ಶಕ್ತಿಸಮೇತವಾದ ಭೇದ. ಇಂತೀ ಸ್ಥಳಂಗಳು, ಭಕ್ತಿಗೆ ನಾಮರೂಪಾದ ಭೇದವನರಿತು ಸ್ಥಲಂಗಳ ಹಂಚಿಹಾಕಿ, ಕುರುಡ ದಡಿವಿಡಿದು ನಡೆವಂತೆ ಷಟ್ ಸ್ಥಲಭೇದ. ಆ ಭೇದಲೋಲುಪ್ತನಾಗಿ ಸರ್ವಾಂಗಲಿಂಗಭರಿತನಾಗಿ ಆಹ್ವಾನ ವಿಸರ್ಜನವಿಲ್ಲದೆ ನಾಮರೂಪೆಂಬ ಉಭಯವಳಿದು ಕಲೆ ತಲೆದೋರದೆ ನಿಂದ ಉಳುಮೆ ಐಕ್ಯಸ್ಥಲಕೂಟ ನಿರ್ವಾಹ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.