Index   ವಚನ - 4    Search  
 
ಕಾಯದಲ್ಲಿ ಸೋಂಕ ಅಳಿದು, ಕೊಂಬುದು ಶುದ್ಧಪ್ರಸಾದಿಯ ಅಂಗ. ಕರಣಂಗಳಿಚ್ಫೆಯಿಲ್ಲದೆ ಕೊಂಬುದು ಸಿದ್ಧಪ್ರಸಾದಿಯ ಅಂಗ. ಭಾವ ತಲೆದೋರದೆ ಜನನ ಮರಣಾದಿಗಳಲ್ಲಿ ನಾಮ ರೂಪು ಕ್ರೀಗೆ ಬಾರದೆ ನಿಶ್ಚಯ ನಿಜಾಂಗಲೇಪವಾಗಿ ಕೊಂಬುದು ಪ್ರಸಿದ್ಧಪ್ರಸಾದಿಯ ಅಂಗ. ಇಂತೀ ತ್ರಿವಿಧಪ್ರಸಾದಿಗಳಲ್ಲಿ ಹೊರಗೆ ವಿಚಾರಿಸಿ, ಒಳಗ ಕಂಡು ಒಳಗಿನ ಗುಣದಲ್ಲಿ ಕಳೆ ನಿಂದು ನಿಃಪತಿಯಾಗಿ ದೃಷ್ಟ ತನ್ನಷ್ಟವಾದುದು ಸ್ವಯಂಪ್ರಸಾದಿಯ ಅಂಗ. ಇಂತಿವರಲ್ಲಿ ತಿಳಿದುಳಿದವಂಗಲ್ಲದೆ ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟಿಹೆನೆಂಬುದು ದೃಷ್ಟಾಂತವಲ್ಲ. ಕೊಟ್ಟು ಕೊಂಡೆಹೆನೆಂದಡೆ ಆ ಗುರುವಿಗೂ ಲಿಂಗವೆಂಬುದೊಂದು ಕುರುಹು. ಜಂಗಮಕ್ಕೂ ಲಿಂಗವೆಂಬುದೊಂದು ಕುರುಹು. ಕೊಟ್ಟು ಕೊಂಡೆಹೆನೆಂಬ ಭಕ್ತಂಗೂ ಲಿಂಗವೆಂಬುದೊಂದು ಕುರುಹು. ಇಂತೀ ಬೀಜ, ಆ ಬೀಜದಿಂದಂಕುರ. ಆ ಅಂಕುರದಿಂದ ಪತ್ರ ಕುಸುಮ ಫಲಭೋಗ. ಆ ಫಲಭೋಗದಿಂದ ಮತ್ತೆ ಬೀಜವಪ್ಪುದರಿಂದ ಕಂಡು ಇಂತೀ ತ್ರಿವಿಧಗುಣ ಲಿಂಗ ಸೋಂಕೆಂಬುದ ಕಂಡು ಒಂದರಿಂದೊಂದು ಗುಣವನರಿದೆಹೆನೆಂದಡೆ ಸಂದನಳಿದ ಸದಮಲಾನಂದವೊಂದು ಸೂತಕವೆಂದಳಿದು ಕೊಡಲಿಲ್ಲ. ಎರಡು ಸೂತಕವೆಂದು ಮುಟ್ಟಿ ಅರ್ಪಿಸಲಿಲ್ಲ. ಮೂರನೊಡಗೂಡಿ ಪ್ರಸಾದವಿದೆಯೆಂದು ಬೇರೆ ಅರ್ಪಿಸಿಕೊಂಬವರಿನ್ನಾರೊ ? ಇಂತೀ ಪ್ರಸಾದಿಯ ಪ್ರಸನ್ನವ ತಿಳಿದಲ್ಲಿ ದಹನ ಚಂಡಿಕೇಶ್ವರಲಿಂಗವು ಪ್ರಸನ್ನಪ್ರಸಾದಿಕಾಯನು.