ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ
ನಾನು ಜ್ಞಾನವೆಂಬ ವಾಹನವಾಗಿರ್ದೆ, ಕಾಣಾ.
ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿರ್ದೆ, ಕಾಣಾ.
ಅಯ್ಯಾ, ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆಂಬ ವಾಹನವಾಗಿರ್ದೆ, ಕಾಣಾ.
ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು
ಜಂಗಮಲಾಂಛನನಾಗಿ ಬಂದಲ್ಲಿ,
ನಾನು ಭಕ್ತನೆಂಬ ವಾಹನವಾಗಿರ್ದೆ, ಕಾಣಾ,
ಕೂಡಲ ಸಂಗಮದೇವಾ.
Art
Manuscript
Music Courtesy:Design : Manjuswamy, Yathish Kasargod Choreography : Dimple.A Lighting Design : Ravimohan Music : Dr C Ashwath Concept - Dialogues : Prasad Kundoor Direction : Suguna Niranthara, Niranthara Theatre Group presents 'Koodalasangama' a dance ballet based on Vachanas of Basavanna.
Hindi Translationप्रभो, जब तुम निराकार थे
तब मैं ज्ञान रूपी वाहन था,
जब तुम नृत्यार्थ खड़े थे,
तब मैं-चैतन्य रूपि वाहन था,
जब तुम साकार थे ।
तब मैं वृषभ रुपी वाहन था,
जब मेरा भव नष्ट करने
तुम जंगम–लांछन में आये
तब मैं भक्त रूपी वाहन था
कूडलसंगमदेव ॥
Translated by: Banakara K Gowdappa
English Translation When you, Lord, were without form,
Lo, I was your carrier-Knowledge my name!
When you, Lord, took a dancing pose,
Lo, I was your carrier-Energy my name!
When you, Lord, did take on a from,
Lo, I was your carrier - Vr̥ṣabha my name!
When you, Lord, came in Jaṅgama garb
With purpose to slay my births,
Lo, I was your carrier - Bhakta my name,
O Lord Kūḍala Saṅgama!
Translated by: L M A Menezes, S M Angadi
Tamil Translationஐயனே, நீ அருவமாயிருந்த போழ்து
நான் ஞானமெனும் ஊர்தியாகினேன். காணாய்
ஐயனே, நீ திருக்கூத்திற்கு நின்றபோழ்து
நான் பேருணர்வெனும் ஊர்தியாகினேன், காணாய்,
ஐயனே, நீ உருவமாயிருந்த போழ்து
நான் ஆனேறெனும் ஊர்தியாகினேன் காணாய்.
ஐயனே நீ என்பிறவிதனைக் களைவதற்குத்
திருநீற்றுச்சாதன மெய்யடியானாய் வந்துழி,
நான் தொண்டனெனும் ஊர்தியாகினேன் காணாய்.
கூடல சங்கம தேவனே.
Translated by: Smt. Kalyani Venkataraman, Chennai
Telugu Translationఅయ్యా; నీవు నిరాకారమై యుండ
నేను జ్ఞానమును వాహనమై యుంటికాదె
అయ్యా; నీవు నాట్యమునకు నిల్వ
నేను చైతన్యమను వాహనమై యుంటికాదే!
అయ్యా; నీవు సాకార మై యుండ
నేను వృషభుడను వాహనమై యుంటికాదే;
అయ్యా; నీవు నా భవము ద్రుంప జంగమలాంఛనుడవై రాగ
నేను భక్తుడను వాహనమై యుంటికాదే
కూడల సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಪಿಂಡಜ್ಞಾನಸ್ಥಲವಿಷಯ -
ದೇವರು
ಶಬ್ದಾರ್ಥಗಳುಭವ = ಜನನ, ಮರಣ ರೂಪದ ಸಂಸಾರ; ವೃಷಭ = ನಂದಿ;
ಕನ್ನಡ ವ್ಯಾಖ್ಯಾನಜೀವನಿಗೂ ಶಿವನಿಗೂ ಆದಿಯಿಂದಲೂ ಇರುವ ಸ್ವಾಮಿಭೃತ್ಯಸಂಬಂಧವನ್ನು ಎರಡನೇ ವಚನದಲ್ಲಿ ಪ್ರಸ್ತಾಪಿಸಿ-ಈ ವಚನದಲ್ಲಿ ಅದೇ ಸಂಬಂಧವನ್ನು ಮತ್ತಷ್ಟು ವಿವರಿಸಿರುವರು-ಬಸವಣ್ಣನವರು.
ಜಂಗಮಕ್ಕೆ ಸದಾ ಅವರು ವಿನಮ್ರವಾಗಿಯೇ ನಡೆದುಕೊಂಡಿರುವುದನ್ನು ಹೆಮ್ಮೆಯಿಂದ ಅರಿಕೆಮಾಡಿಕೊಳ್ಳುತ್ತ-ಆ ಜಂಗಮಕ್ಕೆ ತಾವು ತೋರುವ ವಿನಮ್ರತೆ ಅತಿಶಯವಲ್ಲವೆಂದೂ ಜಂಗಮವು ಪರಶಿವನ ಪ್ರತ್ಯಕ್ಷರೂಪವೆಂದೇ ಅವಧರಿಸಿರುವರು. ತನ್ನ ಭವಬಂಧನವನ್ನು ಜಂಗಮವು ಪರಿಹರಿಸುವುದೆಂಬ ಗಾಢನಂಬಿಕೆ ಅವರಿಗೆ. ಬಸವ-ಜಂಗಮರ ನಡುವಣ ಈ ಸೇವಕ-ಸೇವ್ಯಸಂಬಂಧ ಇಂದುನೆನ್ನೆಯದಲ್ಲ-ಅನಾದಿಯಾದುದು-ಅಂದರೆ ಸೃಷ್ಟಿಪೂರ್ವದ ಸಾಕಾರಮಹೇಶ್ವರನ ಹಂತದಿಂದಲೇ ಅಲ್ಲ-ಅಲ್ಲಿಂದತ್ತ ನಿರಾಕಾರ ಶಿವಸ್ಥಿತಿಯಿಂದಲೂ ನಡೆದುಬಂದುದು :
ಪರಶಿವನು ನಿರಾಕಾರಶಿವತತ್ತ್ವವಾದಾಗ ಅದನ್ನು ನಿರ್ವಹಿಸುವ ಜ್ಞಾನವಾಗಿದ್ದರು ಬಸವಣ್ಣನವರು, ಆ ಶಿವನು ಸಾಕಾರ ಮಹೇಶ್ವರನಾದರೆ ಅದನ್ನು ಹೊತ್ತುಮೆರೆಸುವ ವೃಷಭವಾಗಿದ್ದರು ಬಸವಣ್ಣನವರು, ಆ ಮಹೇಶ್ವರನು ದಕ್ಷಿಣಾಮೂರ್ತಿಲೀಲೆಯಲ್ಲಿ ನಾಟ್ಯಮಾಡಲು ತೊಡಗಿದರೆ-ಅವನಿಗೆ ಆಧಾರವೇದಿಕೆಯಾಗಿದ್ದರು ಬಸವಣ್ಣನವರು, ಆ ಮಹೇಶ್ವರನು ಜಂಗಮವಾದರೆ-ಬಸವವಣ್ಣನವರು ಭಕ್ತರಾದರು. ಹೀಗೆ ಶಿವನು ಸದಾ ಸ್ವಾಮಿ, ತಾನು ಸದಾ ಭಕ್ತನೆಂಬುದು ಬಸವಣ್ಣನವರ ಅಭಿಪ್ರಾಯ.
ಕಥಾಸಂದರ್ಭ : (1) ಪರಶಿವನು ಸೃಷ್ಟ್ಯುನ್ಮುಖವಾದ ಮೂರನೇ ತತ್ತ್ವಶ್ರೇಣಿಯಲ್ಲಿ ಮಹೇಶ್ವರನಾಗಿ ಸಕಲ ಜಗತ್ತನ್ನು ಸೃಷ್ಟಿಸಿ-ಅದನ್ನೆಲ್ಲ ತನ್ನ ರೋಮಕೂಪದಲ್ಲಿ ಧರಿಸಿಕೊಂಡು-ತನ್ನನ್ನು ಹೊತ್ತು ಧರಿಸುವರಾರೆಂದು ಯೋಚಿಸಲಾ ಕ್ಷಣವೇ ದಿವ್ಯಪ್ರಭೆಯೊಂದು ಧಗ್ಗೆಂದು ವೃಷಭಾಕಾರವನ್ನು ತಳೆದು ಎದುರುನಿಂತಿತಂತೆ. ಸಕಲವನ್ನೂ ಧರಿಸಿಭರಿಸುವ ಧರ್ಮಸ್ವರೂಪಿಯಾದ ಆ ವೃಷಭನೇ ಮಹೇಶ್ವರನಿಗೆ ವಾಹನವಾದನು. ಶಬ್ದ-ಅರ್ಥಗಳಿಗಿರುವ ಬಂಧವನ್ನು ಹೋಲುವುದು ಈ ವೃಷಭ-ಮಹೇಶ್ವರ ಸಂಬಂಧ. (2) ಇದೇ ಮಹೇಶ್ವರ ಸ್ಥಿತಿಯಲ್ಲಿ ತೋರಿದ ದಕ್ಷಿಣಾಮೂರ್ತಿಯ ಲೀಲೆಯ ಪ್ರಕಾರ : ತಪಸ್ವಿಗಳನ್ನು ಪರೀಕ್ಷಿಸಲೆಂದು ಶಿವನು ಸುಂದರಾಂಗನಾಗಿ ತಪೋವನದಲ್ಲಿ ಕಾಣಿಸಿಕೊಂಡಾಗ-ಆ ತಪಸ್ವಿಗಳ ಹೆಂಡಿರೆಲ್ಲಾ ಅವನ ಹಿಂದೆಯೇ ಮರುಳ್ಗೊಂಡು ಓಡಿದರು. ಅದನ್ನು ಕಂಡ ಋಷಿಗಳು ಖತಿಗೊಂಡು ಹೋಮಕುಂಡವೇರ್ಪಡಿಸಿ-ಅದರಲ್ಲಿ ಕೃತ್ರಿಮದ ಆಹುತಿಗಳನ್ನು ಹಾಕಿದಾಗ-ಮೊದಲಿಗೆ ಒಂದು ಹುಲಿ ಆ ಕುಂಡದಿಂದ ಹೊರಜಿಗಿದು ಶಿವನ ಕಡೆ ಹರಿಹಾದಿತು. ಶಿವನು ಅದನ್ನು ಸಿಗಿದು ಅದರ ಚರ್ಮವನ್ನು ಉಟ್ಟನು. ಕಾಳಸರ್ಪಗಳು ಹರಿದುಬಂದವು-ಅವನ್ನು ಕುಂಡಲಕಂಕಣಾದಿ ಆಭರಣವಾಗಿ ತೊಟ್ಟನು. ಟಂಕ-ಶೂಲ-ಖಡ್ಗ-ಗದೆ-ವಜ್ರ-ಪಾಶ-ಪರಶು ಎಂಬ ಆಯುಧಗಳು ಬಂದವು-ಅವನ್ನು ತನ್ನ ಏಳು ಕೈಗಳಲ್ಲಿ ಧರಿಸಿದ ಕವಲುಕೋಡಿನ ಜಿಂಕೆ ನೆಗೆದು ಬಂದಿತು-ಅದನ್ನು ಎಂಟನೇ ಕೈಯಲ್ಲಿ ಹಿಡಿದುಕೊಂಡನು. ಮತ್ತೆ ಇದ್ದಕಿದ್ದಂತೆಯೇ ಆ ಹೋಮಕುಂಡದಿಂದ ಕಾಡಿಗೆಯ ಮೈಬಣ್ಣದ, ಮೂರು ಕಾಲಿನ, ಆರು ಕೋರೆದಾಡೆಯ ಘೋರಮುಖದ, ಆರು ಭುಜ ಮೂರು ತಲೆ ಕೆಂಗಣ್ಣುಗಳ ಅಪಸ್ಮಾರವೆಂಬ ಭೀಭತ್ಸಪ್ರಾಣಿಯೊಂದು ಅಡ್ಡ ಹಾಕಿತು, ಆಗ ಶಿವನು ಅದನ್ನು ಎಡಗಾಲಿಂದ ಒದ್ದು ಕೆಡವಿ ಮೆಟ್ಟಿನಿಂತ. ಅದೇ ಸಮಯಕ್ಕೆ ಜ್ವಾಲೆ ಚಾಚಿ ನುಗ್ಗಿ ‘ಬಂದ ಅಗ್ನಿಯನ್ನು ಹೂವಿನ ಚಂಡಿನಂತೆ ಉಂಡೆಸುತ್ತಿ ಒಂಬತ್ತನೇ ಕೈಯಲ್ಲಿ ಹಿಡಿದು ಉಳಿದೊಂದು ಕೈಯಿಂದ ಡಮರುಗವನ್ನು ಬಾರಿಸುತ್ತ ತಾಂಡವ ನಾಟ್ಯವಾಡಿದ ಶಿವ. ಆ ನಾಟ್ಯಾಂತ್ಯದಲ್ಲಿ ಶಿವನು ಮೂರು ಕಣ್ಣಿನ ನಾಲ್ಕು ಭುಜದ ಸೌಮ್ಯಾಕಾರವನ್ನೂ ತಾಳಿ, ಜಿಂಕೆ ಮತ್ತು ಡಮರುಗವನ್ನು ಒಂದೊಂದು ಕೈಯಲ್ಲಿ ಹಿಡಿದು, ಉಳಿದೆರಡು ಕೈಗಳಲ್ಲಿ ಅಭಿನಯ ತೋರುತ್ತ-ಅದೇ ಅಪಸ್ಮಾರವನ್ನು ಮೆಟ್ಟಿ ಮೊದಲಿಗಿಂತಲೂ ಸೌಮ್ಯವಾಗಿ ಕುಣಿದಾಡಿದ. ಈ ಭಯಾನಕವೆಂಬ ಸೌಮ್ಯವೆಂಬ ಎರಡೂ ನಾಟ್ಯ ಸಂದರ್ಭಗಳಲ್ಲೂ ಶಿವನಿಗೆ ಆಧಾರವಾದವನು ತಾನೇ ಎಂದಿರುವರು ಬಸವಣ್ಣನವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.