ಬಸವಣ್ಣ   
Index   ವಚನ - 974    Search  
 
ಅಗ್ಫವಣಿಯವಸರ ಸದಾಚಾರ ಸತ್ಕ್ರೀಯೆಂಬ ಭೂಮಿಯ ಮೇಲೆ ಸರ್ವಶುದ್ಧವೆಂಬ ಗೋಮಯವ ತಂದು, ವಿನಯಾರ್ಥವೆಂಬ ಉದಕದಿಂದ ಸಮ್ಮಾರ್ಜನೆಯಂ ಮಾಡಿ ತನುವಿನ ಅವಗುಣಂಗಳಂ ಹುಡಿಗುಟ್ಟಿ ರಂಗವಾಲೆಯನಿಕ್ಕಿ, ಅಕ್ಷಯವೆಂಬ ಬಿಂದಿಗೆಯಲ್ಲಿ ಪರಮಾನಂದವೆಂಬ ಅಗ್ಫವಣಿಯ ತುಂಬಿ, ಸಮರಸದಿಂದ ಮಜ್ಜನಕ್ಕೆರೆಯಲು ಹೃದಯಕಮಲವೆಂಬ ಪುಷ್ಪಮಂ ಸಲಿಸಿ, ಸೌಖ್ಯತರ ಶಾಂತಿಯೆಂಬ ಗಂಧವನಿಟ್ಟು, ಅಕ್ಷಯವೆಂಬ ಅಕ್ಷತೆಯನಳವಡಿಸಿ, ಸದ್ಭಾವವೆಂಬ ಧೂಪಮಂ ಬೀಸಿ, ಸುಜ್ಞಾನವೆಂಬ ನಿವಾಳಿಯನೆತ್ತಿ ನಿತ್ಯನಿರಂಜನವೆಂಬ ನೀರಾಜನಮಂ ಬೆಳಗಲು, ಬ್ರಹ್ಮನಾದವೆಂಬ ಘಂಟೆಯಂ ಬಾರಿಸಲು ನಿತ್ಯಲಿಂಗಾರ್ಚನೆಗೆಡೆಮಾಡಲು, ಇದರ ವರ್ಮಕರ್ಮಸ್ಥಿತಿಯನರಿದು ಶಿವಲಿಂಗಾರ್ಚನೆಯ ಮಾಡಬಲ್ಲಡೆ, ಮರ್ತ್ಯದಲ್ಲಿ ನಾನಾರನೂ ಕಾಣೆನು. ಕೂಡಲಸಂಗಮದೇವಾ, ಪ್ರಭು ಶಿವಲಿಂಗಾರ್ಚನೆಯಂ ಮಾಡಲು, ನಾನೆ ಪರಿಚಾರಕನು.