ಬಸವಣ್ಣ   
Index   ವಚನ - 1038    Search  
 
ಆತ್ಮನೆ ಲಿಂಗವೆಂಬರು, ಆತ್ಮನ ದೇಹರಹಿತವಾಗಿ ಕಾಬವರುಂಟೆ? ಪ್ರಾಣವೆ ಲಿಂಗವೆಂಬರು, ಪ್ರಾಣವನು ಕಾಯವ ಬಿಟ್ಟು ಬೇರೆ ಕಾಣಬಹುದೆ? ಕಂಡೆಹೆನೆಂದಡೆ ಅದು ನಿರವಯ, ನಿರಾಕಾರವಾದುದು, ಭಾವಕ್ಕೆ ಬಾರದು. ಭಾವಕ್ಕೆ ಬಾರದುದ ಪೂಜಿಸಬಹುದೆ? ಅದು ಕಾರಣ, ಕಾಯದ ಕರಸ್ಥಲದಲ್ಲಿ ಕ್ರಿಯಾಲಿಂಗವಿಡಿದು ನೋಡಲು ಪ್ರಾಣ ಆತ್ಮನೆಂಬವು ಬೇರಿಲ್ಲ. ಇದು ಕಾರಣ, ಇಷ್ಟವ ಬಿಟ್ಟು ಬಟ್ಟಬಯಲೆ ವಸ್ತುವೆಂಬ ಮಿಟ್ಟಿಯ ಭಂಡರ ನಮ್ಮ ಕೂಡಲಸಂಗನ ಶರಣರು ಮೆಚ್ಚರು.