ಬಸವಣ್ಣ   
Index   ವಚನ - 1150    Search  
 
ಕಾಲಿಲ್ಲದೆ ನಡೆವನು, ಕೈಯಿಲ್ಲದೆ ಹಿಡಿವನು, ಕಣ್ಣಿಲ್ಲದೆ ನೋಡುವನು ಸಹಜವಾಗಿ. ಮೈಯಿಲ್ಲದ ಬಣ್ಣ, ಮಥನವಿಲ್ಲದ ಕೂಟ. ಸೈವೆರಗಾಗಿ, ಸಿಡಿಯ ಮೇಲೆ, ಒಡಲ ತನ್ನನರಿಯದು, ಒಡಲ ತಾನರಿಯನು. ಬಿಡದೆ ಎನ್ನ ಬೆಂಬತ್ತಿ ಬಂದ ಪರಿಯ ನೋಡಾ. ಜಡವಿಡಿದ ಎನ್ನ ಕಾಯದ ಕಳವಳವ ತಿಳುಹಲೆಂದು, ಅಡಿಗಡಿಗೆ ಅನುಭಾವವ ತೋರುತ್ತಲಿದ್ದಾನೆ. ಕುಳ್ಳಿತ್ತೆಡೆಯಲ್ಲಿ ಕುಂಟ, ನಿಂದಿದ್ದೆಡೆಯಲ್ಲಿ ಹೆಳವ. ಎಲ್ಲಿ ನೋಡಿದಡಲ್ಲಿ ಪರಿಪೂರ್ಣನು. ಮೆಲ್ಲಮೆಲ್ಲನೆ ಒಳಗ(ನ)ರಿದು ತೋರುತ್ತೈದಾನೆ. ಬಲ್ಲವರೆಲ್ಲಾ ಬದುಕಿಯೆಂದು ಝಲ್ಲರಿಯ ಮೇಲೊಂದು ಬೆಳುಗೊಡೆಯ ಹಿಡಿದು ಬಲ್ಲಿದನಾನೆಯ ತಡೆದು ನಿಲ್ಲಿಸಬಲ್ಲನು. ಕೂಡಲಸಂಗಮದೇವರ ಮಹಾಮನೆಯಲ್ಲಿ ಪ್ರಭುದೇವರ ಮೊರೆಯ ಹೊಕ್ಕು ಬದುಕಿದೆನು.