ಬಸವಣ್ಣ   
Index   ವಚನ - 1154    Search  
 
ಕುಲವ ನೋಡದೆ, ಛಲವ ನೋಡದೆ, ನಿಲವ ನೋಡದೆ ಕೂಡಿದ ಬಳಿಕ, ಅಲ್ಲಿ ಹೆಚ್ಚು ಕುಂದನರಸಲುಂಟೆ? ಮುಂದುವರಿದು ಜಂಗಮಕ್ಕೆ ಭಕ್ತಿಯ ಮಾಡೆಂದು ನಿಮ್ಮ ಕಾರುಣ್ಯವನುಪದೇಶವ ಮಾಡಿದ ಬಳಿಕ ಬಂದುದ ಬಂದಂತೆ ಸಮನಿಸಿಕೊಳ್ಳಬೇಕಲ್ಲದೆ ಅಂತಿಂತೆನಬಾರದು ಕೇಳಯ್ಯಾ. ನೀನು ನಿರಾಕಾರ, ಸಾಕಾರವೆಂಬೆರಡು ಮೂರ್ತಿಯ ಧರಿಸಿಪ್ಪೆಯಾಗಿ, ಒಂದ ಜರೆದು ಒಂದ ಹಿಡಿದಿಹೆನೆಂದಡೆ ಅದೆ ಕೊರತೆ ನೋಡಾ ಪ್ರಭುವೆ, ಕೂಡಲಸಂಗಮದೇವಾ.