ಬಸವಣ್ಣ   
Index   ವಚನ - 1169    Search  
 
ಗಾಂಧಾರಿ ಮಾಂಧಾರಿಯೆಂಬ ಅಹೋರಾತ್ರಿಯಲ್ಲಿ ಲಿಂಗವ ಪೂಜಿಸಬೇಕು. ಊರ ಕೋಳಿ ಕೂಗದ ಮುನ್ನ, ಕಾಡನವಿಲು ಒದರದ ಮುನ್ನ, ಲಿಂಗವ ಪೂಜಿಸಬೇಕು. ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ, ತುಂಬಿ ಮುಟ್ಟಿ ಪುಷ್ಪ ನಿರ್ಮಾಲ್ಯವಾಗದ ಮುನ್ನ ಲಿಂಗವ ಪೂಜಿಸಬೇಕು. ಅದೆಂತೆಂದಡೆ; 'ಯೋ ಲಿಂಗಮರ್ಧರಾ ತ್ರಾ ತು ಶುಚಿರ್ಭೂತ್ವಾ ಪ್ರಪೂಜಯೇತ್ ಅಗ್ನಿಷ್ಟೋಮಸಹಸ್ರಸ್ಯ ಧರ್ಮಸ್ಯ ಲಭತೇ ಫಲಂ' ಎಂದುದಾಗಿ, ಶುದ್ಧಾಂತಃಕರಣನಾಗಿ ಶಿವಪೂಜೆಯ ಮಾಡಬೇಕು, ಆತಂಗೆ ಅಗ್ನಿಷ್ಟೋಮ ಸಹಸ್ರಫಲವಹುದು. ತನ್ನೊಡನೆ ಮಲಗಿರ್ದ ಸತಿಯನೆಬ್ಬಿಸದೆ ಶಿವಲಿಂಗಕ್ಕೆರೆವ ಸದ್ಭಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ, ಕೂಡಲಸಂಗಮದೇವಾ.