ಬಸವಣ್ಣ   
Index   ವಚನ - 1191    Search  
 
ಜಂಗಮವೆ ಜ್ಞಾನರೂಪು, ಭಕ್ತನೆ ಆಚಾರರೂಪವೆಂಬುದು ತಪ್ಪದು ನೋಡಯ್ಯಾ. ನಾನು ನಿಮ್ಮಲ್ಲಿ ಆಚಾರಿಯಾದಡೇನಯ್ಯಾ, ಜ್ಞಾನವಿಲ್ಲದನ್ನಕ್ಕರ ತಲೆಯಿಲ್ಲದ ಮುಂಡದಂತೆ. ಜ್ಞಾನ ಉದಯವಾಗದ ಮುನ್ನವೆ ತಲೆದೋರುವ ಆಚಾರವುಂಟೆ ಜಗದೊಳಗೆ? ಜ್ಞಾನದಿಂದ ಆಚಾರ, ಜ್ಞಾನದಿಂದ ಅನುಭಾವ, ಜ್ಞಾನದಿಂದ ಪ್ರಸಾದವಲ್ಲದೆ, ಜ್ಞಾನವನುಳಿದು ತೋರುವ ಘನವ ಕಾಣೆನು. ಎನ್ನ ಆಚಾರಕ್ಕೆ ನೀನು ಜ್ಞಾನರೂಪಾದ ಕಾರಣ ಸಂಗನಬಸವಣ್ಣನೆಂಬ ಹೆಸರುವಡೆದೆನು. ಅನಾದಿ ಪರಶಿವನು ನೀನೆ ಆಗಿ, ಘನಚೈತನ್ಯಾತ್ಮಕನೆಂಬ ಮಹಾಜ್ಞಾನವು ನೀನೆ ಆದೆಯಲ್ಲದೆ, ನಾನೆತ್ತ, ಶಿವತತ್ತ್ವವೆತ್ತಯ್ಯಾ? ಕೂಡಲಸಂಗಮದೇವರು ಸಾಕ್ಷಿಯಾಗಿ, ನಾನು ಪ್ರಭುದೇವರ ತೊತ್ತಿನ ಮಗನೆಂಬುದ ಮೂರು ಲೋಕವೆಲ್ಲವೂ ಬಲ್ಲುದು ಕಾಣಾ, ಪ್ರಭುವೆ.