ಬಸವಣ್ಣ   
Index   ವಚನ - 1198    Search  
 
ಜನನಸೂತಕ, ಕುಲಸೂತಕ, ರಜಃಸೂತಕ, ಎಂಜಲಸೂತಕ, ಪ್ರೇತಸೂತಕ ಎಂಬಿವಾದಿಯಾದ ಸರ್ವಸೂತಕಂಗಳು ಅಂಗಲಿಂಗ ಸಂಬಂಧಿಗಳಾದ ಲಿಂಗಭಕ್ತರಿಗಿಲ್ಲ ನೋಡಾ, ಅದೆಂತೆಂದೊಡೆ; ʼಆದಿಬಿಂದುರ್ಭವೇದ್ಬೀಜಂ ಬೀಜಮಧ್ಯಸ್ಥಿತಂ ಕುಲಮ್ ಬೀಜಂ ನಾಸ್ತಿ ಕುಲಂ ನಾಸ್ತಿ ತಸ್ಮೈ ಶಿವಕುಲಂ ಭವೇತ್' ಎಂದುದಾಗಿ ಪೂರ್ವಾಚಾರವನಳಿದು ಪುನರ್ಜಾತನಾಗಿ, ಅಂಗದ ಮೇಲೆ ಲಿಂಗಸಾಹಿತ್ಯನಾದ ಭಕ್ತಂಗೆ ಜನನಸೂತಕವೆಂಬುದೆ ಪಾತಕ ನೋಡಾ. ಶಿವಭಕ್ತರಾದ ಬಳಿಕ ಭವಿನೇಮಸ್ತರ ಕಳೆದು ಶಿವಕುಲವೆ ಕುಲವಾದ ಭಕ್ತರಿಗೆ ಕುಲಸೂತಕವೆಂಬುದೆ ಪಾತಕ ನೋಡಾ. ಗುರುಪಾದತೀರ್ಥ, ಲಿಂಗಪಾದತೀರ್ಥ, ಜಂಗಮಪಾದತೀರ್ಥ ಆದಿಯಾದ ಲಿಂಗೋದಕ, ಪಾದೋದಕ, ಪ್ರಸಾದೋದಕ ಎಂಬ ತ್ರಿವಿಧೋದಕದಲ್ಲಿ ಸರ್ವಪಾಕಪ್ರಯತ್ನ, ನಾನಾ ಕ್ರಿಯಾವಿಧಾನ, ಸ್ನಾನಪಾನಂಗಳಿಂದ ಬಾಹ್ಯಾಭ್ಯಂತರಂ ಶುಚಿಯಾದ, ಶುದ್ಧನಿರ್ಮಲದೇಹಿಯಾದ ಭಕ್ತಂಗೆ ರಜಃಸೂತಕವೆಂಬುದೆ ಪಾತಕ ನೋಡಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಯುಕ್ತವಾದ ಸದಾಸನ್ನಹಿತ ಭಕ್ತಂಗೆ ಎಂಜಲಸೂತಕವೆಂಬುದೆ ಪಾತಕ ನೋಡಾ. ಗುರುವಿನಿಂ ಜನನ, ಚರಲಿಂಗದಿಂ ಸ್ಥಿತಿ, ಪರಮಪಾವನ ಘನಮಹಾಲಿಂಗದೊಳೈಕ್ಯ. ಅದೆಂತೆಂದೊಡೆ; ‌ʼಸದ್ಗುರೋಃ ಪಾಣಿಜಾತಸ್ಯ ಸ್ಥಿತೇ ಸದ್ಭಕ್ತಸಂಗಿನಾಮ್ ಲೀಯತೇ ಚ ಮಹಾಲಿಂಗೀ ವೀರಶೈವೋತ್ತಮೋತ್ತಮʼ ಎಂದುದಾಗಿ, ನಿಜಲಿಂಗೈಕ್ಯವಾದ ಸದ್ಭಕ್ತಂಗೆ ಪ್ರೇತಸೂತಕವೆಂಬುದೆ ಪಾತಕ ನೋಡಾ. ಇಂತೀ ಪಂಚಸೂತಕವನುಳ್ಳ ಪಾತಕಂಗಳ ಪಂಚಾಚಾರಯುಕ್ತನಾದ ಸದ್ಭಕ್ತಂಗೆ ಕಲ್ಪಿಸುವ ಪಂಚಮಹಾಪಾತಕರ ಅಘೋರ ನರಕದಲ್ಲಿಕ್ಕುವ ಕೂಡಲಸಂಗಯ್ಯ.