ಬಸವಣ್ಣ   
Index   ವಚನ - 1220    Search  
 
ದೇವ ದೇವ ಮಹಾಪ್ರಸಾದ ! ಅವಧರಿಸು ದೇವಾ ಎನ್ನ ಬಿನ್ನಹವ: ಕಾಯದ ಮಾಯದ ಸಡಗರದಲ್ಲಿ ಹುಟ್ಟಿಸಿದಿರಿ ಎನ್ನ, ಅದು ನಿಮ್ಮ ಲೀಲಾವಿನೋದ. ಆ ಕಾಯದ ಮಾಯದ ತಲೆಯ ಚಿವುಟಿ ಶ್ರೀಗುರುಕಾರುಣ್ಯವ ಮಾಡಿ ಗುರುಲಿಂಗಜಂಗಮ ತ್ರಿವಿಧಭಕ್ತಿಯ ಘನವ ತೋರಿ ನಿಮ್ಮ ಪಾದೋದಕ ಪ್ರಸಾದವನಿತ್ತು ರಕ್ಷಿಸಿದಿರಿ, ಅದು ನಿಮ್ಮ ಲೀಲಾವಿನೋದ. ಪರವಾದಿ ಬಿಜ್ಜಳ ಒರೆಗಲ್ಲಾದಲ್ಲಿ ಮುನ್ನೂರರುಸತ್ತ ಪ್ರಾಣವನೆತ್ತಿ, ಮೂವತ್ತಾರು ಕೊಂಡೆಯರ ಪರಿಹರಿಸಿ, ಎಂಬತ್ತೆಂಟು ಪವಾಡವ ಮೆರೆದಿರಿ, ಅದು ನಿಮ್ಮ ಲೀಲಾವಿನೋದ. ಎನ್ನ ಮನದ ಮಲಿನವ ತೊಳೆಯಲೆಂದು ಬಂದು, ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡು, ನಿಮ್ಮ ನಿಜ ಮಹಿಮೆಯನೆಲ್ಲಾ ಪ್ರಮಥರ ಮುಂದೆ ತೋರಿ, ಎನ್ನ ಪಾವನವ ಮಾಡಿ, ಷಡುಸ್ಥಲಮಂ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನ ನಿಮ್ಮಂತೆ ಮಾಡಿದಿರಿ, ಅದು ನಿಮ್ಮ ಲೀಲಾವಿನೋದ. ಕೂಡಲಸಂಗಮದೇವಾ, ಎನ್ನ ವರ್ಮದ ಸಕೀಲವ ನೀವೆ ಬಲ್ಲಿರಾಗಿ ಎನಗೊಮ್ಮೆ ತಿಳುಹಿಕೊಟ್ಟು ಎನ್ನನುಳುಹಿಕೊಳ್ಳಾ ಪ್ರಭುವೆ.