ಬಸವಣ್ಣ   
Index   ವಚನ - 1258    Search  
 
ನೀಲದ ಮಣಿಯೊಂದು ಮಾಣಿಕವ ನುಂಗಿದಡೆ, ವಜ್ರ ಬಂದು ಅದು ಬೇಡವೆಂದುಗುಳಿಸಿತ್ತು ನೋಡಾ, ಅಡಗಿದ ಮಾಣಿಕ್ಯ ನೀಲದ ತಲೆಯ ಮೆಟ್ಟಿ, ಆನಂದನಾಟ್ಯವನಾಡುತ್ತಿದ್ದಿತ್ತು. ಅಂಬರದೊಳಗಣ ಮುಗ್ಧೆ ಕಂಗಳ ಮುತ್ತಿನ ಮಣಿಯ ಮಥನವಿಲ್ಲದೆ ನುಂಗಿ ಉಗುಳುತ್ತಿದ್ದಳು. ಲಿಂಗ ಜಂಗಮವೆಂಬ ಇಂದರಿದು ಸುಖಿಯಾದೆನು, ಕೂಡಲಸಂಗಮದೇವರಲ್ಲಿ ಪ್ರಭುವಿನ ಕೃಪೆಯಿಂದ ನಾನು ಬದುಕಿದೆನು.