ಬಸವಣ್ಣ   
Index   ವಚನ - 1351    Search  
 
ವಿಷ್ಣು ವರಾಹವತಾರದಲ್ಲಿ ಹಂದಿಯಂ ತಿಂಬುದಾವಾಚಾರವೋ? ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೋ? ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೋ? ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೋ? ಇಂತಿವನೆಲ್ಲ ಅರಿಯದೆ ತಿಂದರು. ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ ಹೋತನ ಕೊಂದು ತಿಂಬುದಾವಾಚಾರದೊಳಗೋ? ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ. ನಮ್ಮ ಕೂಡಲಸಂಗಮದೇವಂಗೆ ಅಧಿದೇವತೆಗಳ ಸರಿಯೆಂಬವರ ಬಾಯಲ್ಲಿ ಸುರಿಯುವೆ ಬಾಲಹುಳುಗಳು.