ಬಸವಣ್ಣ   
Index   ವಚನ - 1388    Search  
 
ಸ್ಥೂಲತನುವೆಂಬ ಭಾಂಡದಲ್ಲಿ ಸರ್ವಾಚಾರವೆಂಬ ಸಯದಾನವ ತುಂಬಿದೆ. ತುಂಬಲೊಡನೆ ಅಗ್ನಿಯಿಲ್ಲದ ಮುನ್ನ ಪಾಕವಾಯಿತ್ತು, ಮೇಲು ಸಾಧನವಿಲ್ಲದ ಮುನ್ನ ರುಚಿ ಪಕ್ವವಾಯಿತ್ತು. ಅದನು ಸೂಕ್ಷ್ಮತನುವೆಂಬ ಭಾಂಡದಲ್ಲಿ ಬರಿಕೆಯ್ದು, ಕಾರಣತನುವಿನಲ್ಲಿ ಕುಳ್ಳಿರ್ದು ಊಡೆಹೆನೆಂದನುಮಾಡಲು, ಪ್ರಕೃತಿಯಳಿದು ಒಂದೆ ಭಾಂಡವಾದುದ ಕಂಡು, ಉಣಲೊಲ್ಲದೆ ಅನ್ಯರಿಗಿಕ್ಕದೆ, ಎನ್ನದೆನ್ನದೆ, ಸಯದಾನಂಗಳ ತೆಗೆದುಕೊಳ್ಳದೆ, ಬೀಸರವೋಗದೆ, ಒಂದರೊಳಗೊಂದಿತ್ತೆನ್ನದೆ ಉಂಡು ಸುಖಿಯಾದೆನಯ್ಯಾ, ಕೂಡಲಸಂಗಮದೇವಾ.