ಅಯ್ಯಾ, ಮತ್ತೊಂದು ವೇಳೆ ಧರ್ಮರಾಜನ ವಾರ್ತೆಯ ಕೇಳಿ
ನಾನು ಅವನಂತೆ ಮಹಾದಾನವ ಮಾಡಬೇಕೆಂದು
ಅನ್ನದಾನ-ವಸ್ತ್ರದಾನ-ಕನ್ಯಾದಾನ-ಧನಧಾನ್ಯ ಕಾಂಚನ ಮೊದಲಾಗಿ
ಷೋಡಶಮಹಾದಾನವ ಮಾಡುವುದಯ್ಯ.
ಎಂದಿಗೋ ಯಾವ ಕಾಲಕ್ಕೋ ತನ್ನ ಪವಿತ್ರದ ಸದ್ಗುರುವು
ಧರ್ಮದ ವಾರ್ತೆಯ ಕೇಳಿ,
ಮನೆಗೆ ಬಂದು ಭಿಕ್ಷವ ಬೇಡಲು,
ನನ್ನ ಪುಣ್ಯಕ್ಕೆ ಕೊಟ್ಟಷ್ಟು ಒಯ್ದರೆ ಒಯ್ಯಿರಿ
ಒಯ್ಯದಿದ್ದಡೆ ರಾಜಾರ್ಥಕ್ಕೆ ಹೇಳಿ
ಹೊರಯಿಕ್ಕೆ ಹಾಕುವೆನೆಂದು
ಮೂಳನಾಯಿ ಬಗುಳಿದಂತೆ ನುಡಿವುದಯ್ಯ
ಇಂಥ ಗುರುದ್ರೋಹಿ ನೀಚಜೀವನ ಸಂಗವ ತೊಲಗಿಸಿ
ನಿಮ್ಮ ಕೃಪೆಯಿಂದ ರಕ್ಷಿಸಯ್ಯ
ನಿಷ್ಕಳಂಕ ನಿಷ್ಪ್ರಪಂಚ ನಿಷ್ಕಾಮಮೂರ್ತಿ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.