Index   ವಚನ - 26    Search  
 
ಅಯ್ಯಾ, ಮತ್ತೊಂದು ವೇಳೆ ಸತ್ಯೇಂದ್ರಚೋಳನ ವಾರ್ತೆಯ ಕೇಳಿ ಅನ್ನಛತ್ರ ಅರವಟ್ಟಿಗೆಗಳು ಕೆರೆಬಾವಿಗಳು ದಾನ ಧರ್ಮ ಪರೋಪಕಾರಗಳು ಮುಂತಾಗಿ ಮಾಡುವುದಯ್ಯ ತಾನು ಬಾಲನಾಗಿದ್ದಲ್ಲಿ ಒಬ್ಬ ವಿದ್ಯಬುದ್ಧಿ ಹೇಳಿದ ಗುರುವು ಸತ್ಯದ ವಾರ್ತೆಯ ಕೇಳಿ ಮನೆಗೆ ಬಂದು ನಿಂತು ಮಾತನಾಡಿದಡೆ ನೀನ್ಯಾರೊ? ಎಂದು. ಅರ್ಥೇಷಣ, ಪುತ್ರೇಷಣ, ದಾರೇಷಣದ ಮದಗಳು ತಲೆಗೇರಿ ಅಹಂಕಾರದಿಂದ ಮನುಷ್ಯರ ಹಚ್ಚಿ ಮನೆಯಿಂದ ಹೊರಡಿಸಿ ನೂಕಿಸುವುದಯ್ಯ. ಮತ್ತಾರಾದಡು ಗುರುಹಿರಿಯರು ಕಂಡು ಎಲೆ ಜೀವನೆ ನಿನ್ನ ಬಾಲತ್ವದ ವಿದ್ಯಬುದ್ಧಿ ಗುರುವೆಂದು ಹೇಳಿದಡೆ, ಅವನೇನು ಪುಗಸಾಟೆ ಹೇಳಿದನೆ? ನನ್ನ ರೊಕ್ಕವ ತಿಂದು ಹೇಳಿದ, ನೀನೊಬ್ಬ ನನಗೆ ಬುದ್ಧಿ ಹೇಳೋಕೆ ಎಂದು ದುರ್ವಾಕ್ಯವ ನುಡಿವುದಯ್ಯ. ಇಂಥ ಭವದ ಹಂದಿಯ ಜಡಜೀವನ ಸಂಗವ ಪರಿಹರಿಸಿ ರಕ್ಷಿಸಯ್ಯ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.