Index   ವಚನ - 13    Search  
 
ಕ್ಷುತ್ತು ಪಿಪಾಸೆಯರತಡೇನು, ಭಕ್ತನಪ್ಪನೆ? ಸ್ವೇಚ್ಛಾಗಮನಿಯಾದಡೇನು, ಭಕ್ತನಪ್ಪನೆ? ತನು ಬಯಲಾದಡೇನು, ಭಕ್ತನಪ್ಪನೆ? ಅಷ್ಟಮಹಾಸಿದ್ಧಿಯುಳ್ಳರೇನು, ಭಕ್ತನಪ್ಪನೆ? ಚತುರ್ವಿಧಪದವ ಪಡೆದು ಕೈಲಾಸದಲ್ಲಿದ್ದಡೇನು, ಭಕ್ತನಪ್ಪನೆ? ಮಹತ್ವವ ಹಲವು ತೋರಿ ಮೆರೆದಡೇನು, ಭಕ್ತನಪ್ಪನೆ? ಅಲ್ಲಲ್ಲ, ಭಕ್ತಿಯ ಪರಿ ಎಂತೆಂದಡೆ: ಅಂಗತ್ರಯದಲ್ಲಿ ಲಿಂಗತ್ರಯಸಂಬಂಧವಾಗಿ, ಗುರುಲಿಂಗಜಂಗಮವನಾರಾಧಿಸಿ ಲಿಂಗತ್ರಯದಲ್ಲಿ ಸಮವೇಧಿಸಿ, ಆ ತ್ರಿವಿಧಲಿಂಗ ಜಂಗಮವನಾರಾಧಿಸಿ, ಪ್ರಸಾದಗ್ರಾಹಿಯಾದಲ್ಲದೆ ಭಕ್ತನಲ್ಲವೆಂದು ಸಿದ್ಧಸೋಮನಾಥನ ಶರಣರು ನುಡಿವರಯ್ಯಾ ಪ್ರಭುವೆ.