Index   ವಚನ - 15    Search  
 
ಗುರುಲಿಂಗ ಸಂಯೋಗವಾದಲ್ಲಿ ಶಿವಲಿಂಗದುದಯ. ಶಿವಲಿಂಗ ಸಂಯೋಗವಾದಲ್ಲಿ ಜಂಗಮಲಿಂಗದುದಯ. ಜಂಗಮಲಿಂಗ ಸಂಯೋಗವಾದಲ್ಲಿ ಪ್ರಸಾದದುದಯ. [ಪ್ರಸಾದ ಸಂಯೋಗವಾದಲ್ಲಿ ಪ್ರಾಣದುದಯ] ಪ್ರಾಣಸಂಯೋಗವಾದಲ್ಲಿ ಜ್ಞಾನದುದಯ. ಜ್ಞಾನಾನುಭಾವ ಸಂಯೋಗವಾದಲ್ಲಿ ಸುಜ್ಞಾನದುದಯ. ಇಂತೀ ಗುರುವಿನ ಘನವ, ಲಿಂಗದ ನಿಜವ, ಜಂಗಮದ ಮಹಿಮೆಯ, ಪ್ರಸಾದದ ರುಚಿಯ, ಪ್ರಾಣನ ನೆಲೆಯ, ಸುಜ್ಞಾನದ ನಿಲವ, ಮಹಾನುಭಾವದ ಸುಖವನರಿದು ಮರೆದಲ್ಲಿ, ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಲ್ಲಿ ಜ್ಞಾನಭರಿತವಾದಂದು ಸುಜ್ಞಾನ.