Index   ವಚನ - 14    Search  
 
ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ ಬಸವಣ್ಣ. ನಾದವನರ್ಪಿಸಿದಲ್ಲಿ ಅರ್ಪಿತಗೊಂಡಾತ ಬಸವಣ್ಣ. ನಾ ಹೆಂಡಿರನರ್ಪಿಸುವಲ್ಲಿ ಅರ್ಪಿತಗೊಂಡಾತ ಬಸವಿದೇವ. ಎನ್ನ ಧನ ಕೆಟ್ಟಿತ್ತು ಬಸವನಿಂದ, ಮನ ಕೆಟ್ಟಿತ್ತು ಬಸವನಿಂದ. ಎನ್ನ ಗೋತ್ರ ನಿವಾರಣವಾಯಿತ್ತು ಬಸವನಿಂದ. [ವೇಳವಾಳಿ] ನಾ ಹೆಣ್ಣನರ್ಪಿತ ಮಾಡಿದಲ್ಲಿ ಒಪ್ಪುಗೊಂಡಾತ ಬಸವಣ್ಣ. ಕಡುಗಲಿ ತಮ್ಮನನಿರಿಯಲು ಮುರಿಯಿತ್ತು ಅಲಗು ಬಸವನಿಂದ. ಎನ್ನೊಡಲಲಿರ್ದ ಏಳು ಮಾನಿಸಸ್ತ್ರೀಯರು ಏಳಲಾರದೆ ಹೋದರು ಬಸವನಿಂದ. ನಾ ಕೆಟ್ಟೆ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ.