Index   ವಚನ - 30    Search  
 
ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಂತಹ ಗುರುವಿನ ಕೈಯಲ್ಲಿ ಲಿಂಗಧಾರಣವ ಮಾಡಿಸಿಕೊಳಲಾಗದು. ಆತನ ಪಾದತೀರ್ಥ ಪ್ರಸಾದವ ಕೊಳಲಾಗದು. ಅಥವಾ ಪ್ರಮಾದವಶದಿಂದ ಲಿಂಗಧಾರಣವ ಮಾಡಿಸಿಕೊಂಡಡೆಯೂ ಮಾಡಿಸಿಕೊಳ್ಳಲಿ. ಆ ಗುರುವನೆ, ಜಂಗಮದ ಪಾದತೀರ್ಥ ಪ್ರಸಾದವ ಕೊಂಬ ಹಾಂಗೆ ಸದಾಚಾರಿಯ ಮಾಡುವದು. ಶಿಷ್ಯನು, ಆ ಗುರು ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಿರ್ದಡೆ ಮತ್ತೆ ಲಿಂಗವನು ಮರಳಿ ಜಂಗಮದ ಪಾದತೀರ್ಥ ಪ್ರಸಾದವ ಕೊಂಬಂತಹ ಜಂಗಮದ ಕೈಯಲ್ಲಿ ಕೊಟ್ಟು ಕೊಳಬೇಕು. ಜಂಗಮಲಿಂಗಪ್ರಸಾದವ ಕೊಳದಂತಹ ಜಂಗಮದ ಕೈಯಲ್ಲಿ ಪ್ರಸಾದವ ಕೊಳಲಾಗದು. ಆ ಜಂಗಮ ಭಕ್ತನ ಮಠಕ್ಕೆ ಬಂದು ಪಾದತೀರ್ಥ ಪ್ರಸಾದವ ಕೊಳದಂತಹ ಜಂಗಮವಾದಡೂ ಅವರಲ್ಲಿ ಪಾದತೀರ್ಥ ಪ್ರಸಾದವ ಕೊಳಲಾಗದು. ಅದೇನು ಕಾರಣವೆಂದಡೆ: ಜಂಗಮದ ಪಾದತೀರ್ಥ ಪ್ರಸಾದವ ಕೊಳದಂತಹ ಗುರುವಿಂಗೆಯೂ ಲಿಂಗಕ್ಕೆಯೂ ಜಂಗಮಕ್ಕೆಯೂ ಮುಕ್ತಿಯಿಲ್ಲ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.