Index   ವಚನ - 40    Search  
 
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರೆಂತೆಂಬೆ: ಒಬ್ಬ ಭಾವದ ರೂಪು, ಒಬ್ಬ ಪ್ರಾಣದ ರೂಪು. ಒಬ್ಬ ಕಾಯದ ರೂಪು, ಒಬ್ಬನೈಮುಖನಾಗಿ ವಿಷಯಕ್ಕೆ ಕಾಯರೂಪನಾದ. ಒಬ್ಬನೆಲ್ಲರ ಕೂಡಿಕೊಂಡು ನಿರವಯವಾಗಿರ್ಪ. ಇಂತಿವರ ಕೂಡಿಕೊಂಡು ಈ ಲೋಕಕ್ಕೆ ಬಂದೆನು. ಆನು ಹೋಗೆನಯ್ಯಾ, ಇನ್ನು ಹೋದೆನಾದಡೆ ಎನಗಿರ ಠಾವಿಲ್ಲ. ಮುನ್ನ ಹೋದವರೆಲ್ಲಾ ತಗಹಿನಲ್ಲಿ ಕುಳ್ಳಿರ್ದರು. ಆನು ಆ ತಗಹನರಿತೆನಾಗಿ ಬಲ್ಲಡೆ ಬಂದೆನಿಲ್ಲಿಗೆ. ಇಲ್ಲೆನ್ನೊ ಮದ್ದಳಿಗ, ಒಲ್ಲೆನ್ನೊ ಕಹಳೆಕಾರ. ಬಿಂದುವ ಹರಿದು ತಿಂದು ಹಾಕಿರೊ, ತಂತಿಯ ಹರಿಯಿರೊ. ತಾಳ ವಿತಾಳವಾಯಿತ್ತಲ್ಲಾ ಕೇಳಿರೆ ಕೇಳಿರೆ. ನಿಃಶೂನ್ಯವಾಯಿತ್ತಲ್ಲಾ ಕೇಳಯ್ಯ ಕೇಳಯ್ಯ. ರೇಕಣ್ಣಪ್ರಿಯ ನಾಗಿನಾಥಾ, ಬಸವಣ್ಣನಿಂದ ಬದುಕಿತೀ ಲೋಕವೆಲ್ಲಾ.