Index   ವಚನ - 47    Search  
 
ಮಹಾಕಾಲ ಕಲ್ಪದಲ್ಲಿ, ಮಹಾಪ್ರಮಥರ ಕಾಲಾಗ್ನಿಯಲ್ಲಿ ನರರು ಬೆಂದು ಸುರರುಗಳ ನೆಮ್ಮುವರು. ಸುರರುಗಳು ಬೆಂದು ಋಷಿಗಳ ನೆಮ್ಮುವರು. ಋಷಿಗಳು ಬೆಂದು ಬ್ರಹ್ಮರುಗಳ ನೆಮ್ಮುವರು. ಬ್ರಹ್ಮರುಗಳು ಬೆಂದು ವಿಷ್ಣುಗಳ ನೆಮ್ಮುವರು. ವಿಷ್ಣುಗಳು ಬೆಂದು ರುದ್ರರುಗಳ ನೆಮ್ಮುವರು. ರುದ್ರರುಗಳು ಬೆಂದು ಈಶ್ವರರುಗಳ ನೆಮ್ಮುವರು. ಈಶ್ವರರುಗಳು ಬೆಂದು ಸದಾಶಿವರುಗಳ ನೆಮ್ಮುವರು. ಸದಾಶಿವರುಗಳು ಬೆಂದು ಪರಮೇಶ್ವ[ರ]ರುಗಳ ನೆಮ್ಮುವರು. ಪರಮೇಶ್ವರರುಗಳು ಬೆಂದು ಪಂಚಭೂತಂಗಳು ಸಹಿತ ಭಿಕ್ಷಭೈರವನಂತಾಗಿ ಬೆಂದು ಮಾಯೆಯ ನೆಮ್ಮುವರು. ಮಾಯೆ ಮನವ ನೆಮ್ಮಿದೊಡಾ ಮನ ನೆಮ್ಮುವದಕ್ಕೆ ಎರವಿಲ್ಲದೆ ಬೆಂದು, ಬಾಯಾರಿತು ಕಾಣಾ ರೇಕಣ್ಣಪ್ರಿಯ ನಾಗಿನಾಥಾ.