Index   ವಚನ - 53    Search  
 
ವೇಧಿಸಿದ ವೇದಂಗಳೆಲ್ಲ ಉರಿದುಲಿದು ನಿಂದವು. ಸಾಧಿಸಿದ ಶಾಸ್ತ್ರಂಗಳೆಲ್ಲ ಸೋಹೋ ಎಂದಡಗಿದವು. ವಿದ್ಯಾಮುಖ ಪ್ರಣಮವು ಸಿದ್ಧ ಸಿದ್ಧ ಎಂದು ಕದ್ದ ಕಳ್ಳರಂತೆ ತಡವಡಿಸುತ್ತಿರ್ದವು ನೋಡಾ. ಅರ್ಧನಾರೀಶ್ವರನ ರೂಪು ಇಂತೆಂದು ಶುದ್ಧವಾಯಿತ್ತೀ ಲೋಕದೊಳಗೆ. ಜಡೆಯಿಲ್ಲ ಎಮ್ಮ ದೇವಂಗೆ, ಮುಡಿಯಿಲ್ಲ ಎಮ್ಮ ದೇವಂಗೆ. ಮಡದಿಯರಿಬ್ಬರಿಲ್ಲ ಎಮ್ಮ ದೇವಂಗೆ. ಬೆಡಗ ನುಡಿವವರಿಲ್ಲ, ನುಡಿಯಲಮ್ಮದ ಕಾರಣ ಅರಸುತ್ತಿದ್ದಾರು. ಎಡೆಯ ಮಧ್ಯದಲ್ಲಿ ನುಡಿಯ ನುಂಗಿದ ಬೆಡಗ ಹಿಡಿತಂದು ಅರ್ಪಿತವ ಮಾಡಿ; ನಡೆಸಿ ತೋರಿದ ಭಕ್ತರ ತನುವಿನೊಳಗೆ ಕಡೆಯಿಲ್ಲದ ಲಿಂಗವ ಖಂಡಿತವ ಮಾಡಿ ತೋರಿದ ರೇಕಣ್ಣಪ್ರಿಯ ನಾಗಿನಾಥ, ಇಬ್ಬರಿಂದ ಬದುಕಿತೀ ಲೋಕವೆಲ್ಲಾ.