Index   ವಚನ - 184    Search  
 
ಅಂಥ ಬ್ರಹ್ಮಾಂಡವ ಎಂಬತ್ತುಮೂರುಲಕ್ಷದ ಮೇಲೆ ಸಾವಿರದ ಎಂಟುನೂರ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಧೂಮ್ರವೆಂಬ ಭುವನ. ಆ ಭುವನದೊಳು ಅನುಭಾವಾನಂದನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತುನೂರಾ ಹತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು. ಒಂಬತ್ತುನೂರಾ ಹತ್ತುಕೋಟಿ ಇಂದ್ರ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.