ಅಂಥ ಬ್ರಹ್ಮಾಂಡವ ಎಂಬತ್ತೊಂಬತ್ತು ಲಕ್ಷದ ಮೇಲೆ
ಸಾವಿರದ ಎಂಟುನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಮಾರಣನಿರುತಿಯೆಂಬ ಭುವನ.
ಆ ಭುವನದೊಳು ಮಹಾಭೂತಪ್ರಳಯನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತು ನೂರಾ ನಾಲ್ವತ್ತು ಕೋಟಿ
ಇಂದ್ರ ಬ್ರಹ್ಮ ನಾರಾಯಣ ರುದ್ರರಿಹರು.
ಒಂಬತ್ತು ನೂರಾ ನಾಲ್ವತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣ ಕೂಡಲಸಂಗಮದೇವಾ.