ಅಂಥ ಬ್ರಹ್ಮಾಂಡವ ಐದುಕೋಟಿಯ ಮೇಲೆ
ಎರಡುಸಾವಿರದಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಪಿಂಗವೆಂಬ ಭುವನ.
ಆ ಭುವನದೊಳು ಮಹಾಘೋರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ನಾಲ್ವತ್ತುಕೋಟಿ
ಬ್ರಹ್ಮ-ನಾರಾಯಣ-ರುದ್ರರಿಹರು.
ಸಾವಿರಕೋಟಿಯ ಮೇಲೆ ನಾಲ್ವತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.