ಇನ್ನು ಆ ಆದಿ ಉಕಾರ ಪ್ರಣವ, ಆದಿ ಮಕಾರ ಪ್ರಣವ,
ಆದಿ ಅಕಾರಪ್ರಣವ- ಈ ಮೂರು ಪ್ರಣವಂಗಳು ಸಂಯುಕ್ತವಾಗಿ,
ಅಖಂಡ ಮಹಾಜ್ಯೋತಿರ್ಮಯವಾಗಿಹ
ಪರಮೋಂಕಾರ ಉತ್ಪತ್ಯವಾಯಿತ್ತು.
ಅದೆಂತೆಂದೊಡೆ:
ಆ ಆದಿ ಉಕಾರಪ್ರಣವ, ಆದಿ ಮಕಾರಪ್ರಣವ,
ಆದಿ ಅಕಾರಪ್ರಣವ-ಈ ಮೂರು ಬೀಜಾಕ್ಷರ.
ಆದಿ ಉಕಾರಪ್ರಣವವೇ ಆದಿ ಬಿಂದುಪ್ರಣವ.
ಆದಿ ಮಕಾರಪ್ರಣವವೇ ಆದಿ ಕಲಾಪ್ರಣವ.
ಆದಿ ಅಕಾರಪ್ರಣವವೇ ಆದಿ ನಾದಪ್ರಣವ.
ಆದಿ ಉಕಾರಪ್ರಣವವೇ ಸ್ವಯಂಭುಲಿಂಗ.
ಆದಿ ಮಕಾರಪ್ರಣವವೇ ಶಿವತತ್ವ.
ಆದಿ ಅಕಾರಪ್ರಣವವೇ ಗುರುತತ್ವ.
ಇದಕ್ಕೆ ಈಶ್ವರ ಉವಾಚ:
ಅಕಾರಂ ಗುರುತತ್ವಂ ಚ ಉಕಾರಂ ಲಿಂಗತತ್ವಕಂ |
ಮಕಾರಂ ಶಿವತತ್ವಂ ಚ ಇತಿ ಭೇದೋ ವರಾನನೇ ||''
ಇಂತೆಂದುದಾಗಿ,
ಆ ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ.
ಆದಿ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ.
ಆದಿ ಅಕಾರಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ.
ಆ ಆದಿ ಬಿಂದುಪ್ರಣವ, ಆದಿ ಕಲಾಪ್ರಣವ, ಆದಿ ನಾದಪ್ರಣವಕ್ಕೆ
ಆ ಆದಿ ಪ್ರಕೃತಿಪ್ರಣವಕ್ಕೆ ಆ ಆದಿ ಪ್ರಾಣಮಾತ್ರೆಪ್ರಣವವೆ ಆಧಾರ.
ಆ ಪ್ರಾಣಮಾತ್ರೆಪ್ರಣವಕ್ಕೆ
ಅಖಂಡ ಮಹಾಜ್ಯೋತಿರ್ಮಯ ಲಿಂಗವೇ ಆಧಾರ.
ಉ ಎಂಬ ಆದಿಬಿಂದುಪ್ರಣವವು, ಮ ಎಂಬ ಆದಿಕಲಾಪ್ರಣವವು
[ಅಎಂಬ ಆದಿ ನಾದಪ್ರಣವವು] ಸಂಯುಕ್ತವಾಗಿ
ಅಖಂಡ ಮಹಾಜ್ಯೋತಿರ್ಮಯವಾಗಿಹ ಪರಮೋಂಕಾರವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.