ಆ ಮಹಾಸದಾಶಿವ ತತ್ವದ
ಪಂಚಮುಖದಲ್ಲಿ ಉತ್ಪತ್ಯವಾದ
ಪಂಚಮಹಾಭೂತಬ್ರಹ್ಮಾಂಡಕಪಾಲದೊಳು
ಪಂಚಭೂತ ಬ್ರಹ್ಮಾಂಡಕಪಾಲ ಉತ್ಪತ್ಯವದೆಂತೆಂದೊಡೆ:
ಆ ಮಹಾಶಿವತತ್ವದ ನಿರ್ಭಾವ ಮುಖದಲ್ಲಿ ಆತ್ಮನುತ್ಪತ್ಯವಾದನು.
ಆ ಆತ್ಮನಲ್ಲಿ ಆಕಾಶ ಉತ್ಪತ್ಯವಾಯಿತ್ತು.
ಆ ಆಕಾಶದಲ್ಲಿ ವಾಯು ಉತ್ಪತ್ಯವಾಯಿತ್ತು.
ಆ ವಾಯುವಿನಲ್ಲಿ ಅಗ್ನಿ ಉತ್ಪತ್ಯವಾಯಿತ್ತು.
ಆ ಅಗ್ನಿಯಲ್ಲಿ ಅಪ್ಪು ಉತ್ಪತ್ಯವಾಯಿತ್ತು.
ಆ ಅಪ್ಪುವಿನಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು.
ಇದಕ್ಕೆ ಈಶ್ವರ ಉವಾಚ:
ಆತ್ಮನ್ಯಾಕಾಶಸಂಭೂತಿರಾಕಾಶಾದ್ವಾಯು ಸಂಭವಃ |
ವಾಯೋರಗ್ನಿಃ ಸಮುತ್ಪತ್ತಿರಗ್ನೇರಾಪ ಉದಾಹೃತಂ |
ಅಪ್ ಪೃಥ್ವೀಚ ಸಂಭೂತಿರ್ಲಕ್ಷಣೈಕಪ್ರಭಾವತಃ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.