ಆ ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ
ಪಂಚಭೂತ ಬ್ರಹ್ಮಾಂಡಕಪಾಲದೊಳು
ಚತುರ್ದಶಭುವನಂಗಳು, ಸಪ್ತಸಮುದ್ರಂಗಳು,
ಸಪ್ತದ್ವೀಪಂಗಳು, ಸಪ್ತಕುಲಪರ್ವತಂಗಳು,
ಸಮಸ್ತ ಗ್ರಹರಾಶಿ ತಾರಾಪಥಂಗಳಿಹ ಕ್ರಮವೆಂತೆಂದಡೆ:
ಆ ಭೂತಬ್ರಹ್ಮಾಂಡಕಪಾಲದಲ್ಲಿ ಅತಳಲೋಕವಿಹುದು.
ಆ ಅತಳಲೋಕದಿಂದ ಮೇಲೆ ವಿತಳಲೋಕವಿಹುದು.
ಆ ವಿತಳಲೋಕದಿಂದ ಮೇಲೆ ಸುತಳಲೋಕವಿಹುದು.
ಆ ಸುತಳಲೋಕದಿಂದ ಮೇಲೆ ತಳಾತಳಲೋಕವಿಹುದು.
ಆ ತಳಾತಳಲೋಕದಿಂದ ಮೇಲೆ ರಸಾತಳಲೋಕವಿಹುದು.
ಆ ರಸಾತಳಲೋಕದಿಂದ ಮೇಲೆ ಮಹಾತಳಲೋಕವಿಹುದು.
ಆ ಮಹಾತಳಲೋಕದಿಂದ ಮೇಲೆ ಪಾತಾಳಲೋಕವಿಹುದು.
ಆ ಪಾತಾಳಲೋಕದಿಂದ ಮೇಲೆ ಜಲಪ್ರಳಯವಿಹುದು.
ಆ ಜಲಪ್ರಳಯದ ಮೇಲೆ ಮಹಾಕಮಠನಿಹುದು.
ಆ ಮಹಾಕಮಠನ ಮೇಲೆ ಮಹಾವಾಸುಗಿ ಇಹುದು.
ಆ ಮಹಾವಾಸುಗಿಯ ಸುತ್ತುವಳಯಾಕೃತವಾಗಿ
ಅಷ್ಟದಿಕ್‍ಮಹಾಗಜಂಗಳಿಹವು.
ಆ ಅಷ್ಟದಿಕ್‍ಮಹಾಗಜಂಗಳ ಮೇಲೆ ಭೂಲೋಕವಿಹುದು.
ಆ ಭೂಲೋಕದಲ್ಲಿ ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು,
ಸಪ್ತಕುಲಪರ್ವತಂಗಳಿಹವು.
ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ
ಸುತ್ತುವಳಯಾಕೃತವಾಗಿ ಸಮಸ್ತ ಲೋಕಾಲೋಕ ಪರ್ವತವಿಹುದು.
ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ
ವಿಸ್ತೀರ್ಣವೆಂತೆಂದಡೆ:
ಪಂಚಾಶತಕೋಟಿ ವಿಸ್ತೀರ್ಣದ ಮಧ್ಯಭೂಮಿ.
ಆ ಮಧ್ಯಭೂಮಿ ಮಂಡಲವಳಯದಲ್ಲಿ
ಮಹಾಮೇರುಪರ್ವತದ ವಿಸ್ತೀರ್ಣವೆಂತೆಂದಡೆ:
ಒಂದುಕೋಟಿಯು ಇಪ್ಪತ್ತಾರುಲಕ್ಷದ ಮೇಲೆ
ಎಂಬತ್ತೈದುಸಾವಿರ ಯೋಜನಪ್ರಮಾಣು.
ಆ ಮೇರುಮಂದಿರದ ಶಿರದ ಮೇಲೆ
ಮೂವತ್ತುಮೂರುಕೋಟಿ ದೇವರ್ಕಳು,
ನಾಲ್ವತ್ತೆಂಟುಸಾವಿರ ಮುನಿಗಳು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ನಂದಿವಾಹ ಗಣಂಗಳು, ದ್ವಾದಶಾದಿತ್ಯರು,
ನಾರದಮುನಿ ಯೋಗೀಶ್ವರರು, ಅಷ್ಟದಿಕ್ಪಾಲರು, ಏಕಾದಶರುದ್ರರು
ಮುಖ್ಯವಾದ ಅಸಂಖ್ಯಾತ ಮಹಾಗಣಂಗಳು
ಶಿವಸುಖ ಸಂಗೀತ ವಿನೋದದಿಂದ ರಾಜ್ಯಂಗೆಯ್ಯುತ್ತಿರಲು,
ಆ ಮೇರುಮಂದಿರದ ಶಿಖರದ ಕೆಳಗೆ ಜಂಬೂದ್ವೀಪವಿಹುದು.
ಆ ಜಂಬೂದ್ವೀಪವು ಒಂದು ಲಕ್ಷದ ಮೇಲೆ
ಇಪ್ಪತ್ತೈದುಸಾವಿರ ಯೋಜನಪ್ರಮಾಣು.
ಒಂದುಲಕ್ಷದ ಮೇಲೆ ಇಪ್ಪತ್ತೈದುಸಾವಿರ ಯೋಜನದಗಲವಾಗಿ
ಲವಣಸಮುದ್ರವು ಆ ಜಂಬೂದ್ವೀಪಮಂ
ವಳಯಾಕೃತವಾಗಿ ಸುತ್ತಿಕೊಂಡಿಹುದು.
ಎರಡು ಲಕ್ಷದ ಮೇಲೆ ಐವತ್ತುಸಾವಿರ ಯೋಜನ ಪ್ರಮಾಣದಲ್ಲಿ
ಇಕ್ಷುಸಮುದ್ರವು ಆ ಪ್ಲಕ್ಷದ್ವೀಪಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಮೂರುಲಕ್ಷದ ಮೇಲೆ ಎಪ್ಪತ್ತುಸಾವಿರದಯಿನೂರು
ಯೋಜನಪ್ರಮಾಣದಗಲವಾಗಿ
ಕುಶದ್ವೀಪವಂ ಆ ಇಕ್ಷುಸಮುದ್ರವಂ ವಳಯಾಕೃತವಾಗಿ
ಸುತ್ತಿಕೊಂಡಿಹುದು.
ನಾಲ್ಕುಲಕ್ಷದ ಮೇಲೆ ಮೂರುಸಾವಿರ
ಯೋಜನಪ್ರಮಾಣದಗಲವಾಗಿ ಸುರೆಯ ಸಮುದ್ರವು
ಆ ಕುಶದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಐದುಲಕ್ಷ ಯೋಜನಪ್ರಮಾಣದಗಲವಾಗಿ ಶಾಕದ್ವೀಪವು
ಆ ಸುರೆಯ ಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಹದಿನಾಲ್ಕುಲಕ್ಷ ಯೋಜನಪ್ರಮಾಣದಗಲವಾಗಿ ಘೃತಸಮುದ್ರವು
ಆ ಶಾಕದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಇಪ್ಪತ್ತುಲಕ್ಷ ಯೋಜನಪ್ರಮಾಣದಗಲವಾಗಿ ಶಾಲ್ಮಲೀದ್ವೀಪ
ಆ ಘೃತಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಇಪ್ಪತ್ತು ಲಕ್ಷ ಯೋಜನಪ್ರಮಾಣದಗಲವಾಗಿ ದಧಿಸಮುದ್ರವು
ಆ ಶಾಲ್ಮಲೀದ್ವೀಪವಂ ವಳಯಾಕೃತವಾದಿ ಸುತ್ತಿಕೊಂಡಿಹುದು.
ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಪುಷ್ಕರದ್ವೀಪ
ಆ ದಧಿಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ಷೀರಸಮುದ್ರವು
ಆ ಪುಷ್ಕರದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ರೌಂಚದ್ವೀಪವು
ಆ ಕ್ಷೀರಸಮುದ್ರಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಸ್ವಾದೋದಕಸಮುದ್ರವು
ಆ ಕ್ರೌಂಚದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಸಪ್ತದ್ವೀಪಂಗಳ ಸುತ್ತುವಳಯಾಕೃತವಾಗಿ ಲೋಕಾಲೋಕ ಪರ್ವಂತಗಳಿಹವು.
ಆ ಲೋಕಾಲೋಕ ಪರ್ವತಂಗಳ ಸುತ್ತುವಳಯಾಕೃತವಾಗಿ
ಚಕ್ರವಾಳಗಿರಿ ಇಹುದು.
ಆ ಚಕ್ರವಾಳಗಿರಿಗತ್ತತ್ತ ಭೂಮಿ ಪರ್ವತಾಕಾರವಾಗಿಹುದು.
ಆ ಭೂಮಿಯಿಂದಂ ಮೇಲೆ ಮೇಘಮಂಡಲಂಗಳಿಹವು.
ಆ ಮೇಘಮಂಡಲಂಗಳ ಮೇಲೆ ಭುವರ್ಲೋಕವಿಹುದು.
ಆ ಭುವರ್ಲೋಕದಿಂದ ಮೇಲೆ ಸ್ವರ್ಗಲೋಕವಿಹುದು.
ಆ ಸ್ವರ್ಗಲೋಕದಿಂದ ಮೇಲೆ ನಕ್ಷತ್ರಾದಿಮಂಡಲವಿಹುದು.
ಆ ನಕ್ಷತ್ರಾದಿ ಮಂಡಲಂಗಳಿಂದತ್ತ ಮೇಲೆ ಮಹರ್ಲೋಕವಿಹುದು.
ಆ ಮಹರ್ಲೋಕದಿಂದತ್ತ ಮೇಲೆ ಜನರ್ಲೋಕವಿಹುದು.
ಆ ಜನರ್ಲೋಕದಿಂದತ್ತ ಮೇಲೆ ತಪರ್ಲೋಕವಿಹುದು.
ಆ ತಪರ್ಲೋಕದಿಂದತ್ತ ಮೇಲೆ ಸತ್ಯರ್ಲೋಕವಿಹುದು.
ಆ ಸತ್ಯರ್ಲೋಕದಿಂದತ್ತ ಮೇಲೆ ತ್ರಿಲಕ್ಷಕೋಟಿಯೋಜನ
ಪರಿಪ್ರಮಾಣದುದ್ದದಲ್ಲಿ ಮಹಾಪ್ರಳಯಜಲವಿಹುದು.
ಆ ಮಹಾಪ್ರಳಯಜಲದಿಂದತ್ತ ಮೇಲೆ ಶಿವಾಂಡ ಚಿದ್ಬ್ರಹ್ಮಾಂಡವಿಹುದು.
ಇಂಥ ಅನಂತಕೋಟಿ ಚಿದ್ಬ್ರಹ್ಮಾಂಡಗಳು,
ಅನಂತಕೋಟಿ ಲೋಕಾಲೋಕಂಗಳೆಲ್ಲ
ಒಂದರಲ್ಲೊಂದಡಗಿ ಅಪ್ರಮಾಣ ಕೂಡಲಸಂಗಯ್ಯನು
ತನ್ನ ಲೀಲಾವಿನೋದದಿಂದ ನಿಂದರಾಗಿ ನಿಲುವುದು ಕಾಣಾ
ಅಪ್ರಮಾಣಕೂಡಲಸಂಗಮದೇವಾ.