Index   ವಚನ - 296    Search  
 
ಇನ್ನು ಆಧಾರ ಧಾರಣವೆಂತೆಂದಡೆ: ಪುಣ್ಯ-ಪಾಪ ಸ್ವರ್ಗ-ನರಕಾದಿಗಳಿಗೆ ಹೇತುಭೂತವಾಗಿಹ ಅನ್ನ ಪಾನಾದಿಗಳಂ ಬಿಟ್ಟು-ಸಿದ್ಧಾಸನದಲ್ಲಿ ಕುಳ್ಳಿರ್ದು, ಮೂಲಬಂಧ ಒಡ್ಡ್ಯಾಣಬಂಧ ಜಾಳಾಂದರಬಂಧಮಂ ಮಾಡಿ ಜಾಗ್ರ ಸ್ವಪ್ನ ಸುಷುಪ್ತಿ ತಲೆದೋರದೆ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಚೇಂದ್ರಿಯಂಗಳಲ್ಲಿ ಮನ ಪವನಮಂ ಸೂಸಲೀಯದೆ, ಏಕಾಗ್ರಚಿತ್ತನಾಗಿ ಮೂಲವಾಯುವಂ ಪಿಡಿದು ಆಕುಂಚನಂ ಮಾಡಿ, ಮೂಲಾಗ್ನಿಯನೆಬ್ಬಿಸಿ, ಆಧಾರಚಕ್ರ ಚತುರ್ದಳಪದ್ಮವ ಪೊಕ್ಕು ಸಾಧಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಗ್ನಿಯಂ ಪಟುಮಾಡಿ, ಮನಮಂ ಏಕೀಕರಿಸಿ, ಅಲ್ಲಿಂದ ಮೇಲೆ ಸ್ವಾಧಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.