Index   ವಚನ - 315    Search  
 
ಮತ್ತಂ, ಆ ಶಿಷ್ಯನು ತನ್ನ ಪೂರ್ವಾಪರಸಂಬಂಧವ ವಿವೇಕಿಸಿ ನುಡಿದ ಪ್ರಸ್ತಾವದ ವಚನವೆಂತೆಂದಡೆ: ಅನಾದಿಯೆಂಬ ಯುಗದಲ್ಲಿ ಅನಾದಿಕಾಯನೆಂಬ ಒಡಲುವಿಡಿದು ನಿರಂಜನಪ್ರಣವವ ಧ್ಯಾನಿಸುತಿರ್ದೆನು. ಆದಿಯೆಂಬ ಯುಗದಲ್ಲಿ ಆದಿಕಾಯನೆಂಬ ಒಡಲುವಿಡಿದು ಅವಾಚ್ಯಪ್ರಣವವ ಧ್ಯಾನಿಸುತಿರ್ದೆನು. ಅನಾಗತವೆಂಬ ಯುಗದಲ್ಲಿ ಅನಂತಕಾಯನೆಂಬ ದೇಹದೊಳು ಚಿನ್ನಾದಪ್ರಣವವ ಧ್ಯಾನಿಸುತಿರ್ದೆನು. ಅನಂತವೆಂಬ ಯುಗದಲ್ಲಿ ಅನಂತಕಾಯನೆಂಬ ಒಡಲುವಿಡಿದು ಚಿದ್ಬಿಂದುಪ್ರಣವವ ಧ್ಯಾನಿಸುತಿರ್ದೆನು. ಅದ್ಭುತವೆಂಬ ಯುಗದಲ್ಲಿ ಸೂಕ್ಷ್ಮಕಾಯನೆಂಬ ಒಡಲುವಿಡಿದು ಚಿತ್ಕಲಾಪ್ರಣವವ ಧ್ಯಾನಿಸುತಿರ್ದೆನು. ತಮಂಧವೆಂಬ ಯುಗದಲ್ಲಿ ಜ್ಞಾನಕಾಯನೆಂಬ ಒಡಲುವಿಡಿದು ಕಲಾಪ್ರಣವವ ಧ್ಯಾನಿಸುತಿರ್ದೆನು. ತಾರಜವೆಂಬ ಯುಗದಲ್ಲಿ ಸಕಲಕಾಯನೆಂಬ ಒಡಲುವಿಡಿದು ಅನಾದಿಪ್ರಣವವ ಧ್ಯಾನಿಸುತಿರ್ದೆನು. ತಂಡಜವೆಂಬ ಯುಗದಲ್ಲಿ ಪ್ರಚಂಡಕಾಯನೆಂಬ ಒಡಲುವಿಡಿದು ಅನಾದಿ ಅಕಾರಪ್ರಣವವ ಧ್ಯಾನಿಸುತಿರ್ದೆನು. ಭಿನ್ನಜವೆಂಬ ಯುಗದಲ್ಲಿ ಭಿನ್ನಜ್ಞಾನನೆಂಬ ಒಡಲುವಿಡಿದು ಅನಾದಿ ಉಕಾರಪ್ರಣವವ ಧ್ಯಾನಿಸುತಿರ್ದೆನು. ಭಿನ್ನಾಯುಕ್ತವೆಂಬ ಯುಗದಲ್ಲಿ ಅಭಿನ್ನಕಾಯನೆಂಬ ಒಡಲುವಿಡಿದು ಅನಾದಿ ಮಕಾರಪ್ರಣವವ ಧ್ಯಾನಿಸುತಿರ್ದೆನು. ಅವ್ಯಕ್ತವೆಂಬ ಯುಗದಲ್ಲಿ ಅವಿರಳಕಾಯನೆಂಬ ಒಡಲುವಿಡಿದು ಆದಿಪ್ರಣವವ ಧ್ಯಾನಿಸುತಿರ್ದೆನು. ಅಮದಾಯುಕ್ತವೆಂಬ ಯುಗದಲ್ಲಿ ಅಖಂಡಿತಜ್ಞಾನಕಾಯನೆಂಬ ಒಡಲುವಿಡಿದು ಶಿವಪ್ರಣವವ ಧ್ಯಾನಿಸುತಿರ್ದೆನು. ಮಣಿರಣವೆಂಬ ಯುಗದಲ್ಲಿ ಮನೋನ್ಮಯನೆಂಬ ಒಡಲುವಿಡಿದು ಪರಮೋಂಕಾರವ ಧ್ಯಾನಿಸುತಿರ್ದೆನು. ಮಾನ್ಯರಣವೆಂಬ ಯುಗದಲ್ಲಿ ಮಹಾಕಾಯನೆಂಬ ಒಡಲುವಿಡಿದು ಮಹದೋಂಕಾರವ ಧ್ಯಾನಿಸುತಿರ್ದೆನು. ವಿಶ್ವಾರಣವೆಂಬ ಯುಗದಲ್ಲಿ ವಿಶ್ವಕಾಯನೆಂಬ ಒಡಲುವಿಡಿದು ವಿಶ್ವಾಧಿಕಮಹಾಲಿಂಗವ ಧ್ಯಾನಿಸುತಿರ್ದೆನು. ವಿಶ್ವಾವಸುವೆಂಬ ಯುಗದಲ್ಲಿ ವಿಶ್ವಕಾರಣನೆಂಬ ದೇಹವಿಡಿದು ವಿಶ್ವರೂಪಲಿಂಗವ ಧ್ಯಾನಿಸುತಿರ್ದೆನು. ಅಲಂಕೃತವೆಂಬ ಯುಗದಲ್ಲಿ ಅನಂತಕಾಯನೆಂಬ ಒಡಲುವಿಡಿದು ಅಖಂಡಲಿಂಗವ ಧ್ಯಾನಿಸುತಿರ್ದೆನು. ಕೃತಯುಗದಲ್ಲಿ ಅಖಂಡಾತ್ಮಕನೆಂಬ ಗಣೇಶ್ವರನಾಗಿರ್ದಂದು ಅನಾದಿಲಿಂಗವ ಧ್ಯಾನಿಸುತಿರ್ದೆನು. ತ್ರೇತಾಯುಗದಲ್ಲಿ ಅಚಲಾತ್ಮನೆಂಬ ಗಣೇಶ್ವರನಾಗಿರ್ದಂದು ಆದಿಲಿಂಗವ ಧ್ಯಾನಿಸುತಿರ್ದೆನು. ದ್ವಾಪರಯುಗದಲ್ಲಿ ಅಖಂಡಿತನೆಂಬ ಗಣೇಶ್ವರನಾಗಿರ್ದಂದು `ಓಂಕಾರೇಭ್ಯೋ ಜಗದ್ರಕ್ಷಾಯ ಜಗತಾಂ ಪತಯೇ ನಮೋ ನಮಃ' ಎಂಬ ಪ್ರಣವಲಿಂಗವ ಧ್ಯಾನಿಸುತಿರ್ದೆನು. ಕಲಿಯುಗದಲ್ಲಿ ಅಪ್ರಮಾಣಗಣೇಶ್ವರನಾಗಿ ಬಂದು ಅಪ್ರಮಾಣ ಅಗೋಚರಲಿಂಗವ ಧ್ಯಾನಿಸುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.