Index   ವಚನ - 317    Search  
 
ನಿರಂಜನಪ್ರಣವ ಉತ್ಪತ್ಯವಾಗದಂದು ಅವಾಚ್ಯಪ್ರಣವ ಕಲಾಪ್ರಣವವೆಲ್ಲಿದ್ದುದೊ? ಅನಾದಿಪ್ರಣವ ಆದಿಪ್ರಣವ ಉತ್ಪತ್ಯವಾಗದಂದು ಅಕಾರಪ್ರಣವ ಉಕಾರಪ್ರಣವವೆಲ್ಲಿದ್ದುದೊ? ಪರಶಿವಶಕ್ತಿಯ ಸಂಕಲ್ಪದಿಂದ ನಾದ-ಬಿಂದು-ಕಳೆ ಸಂಯುಕ್ತವಾಗಿ ಅಖಂಡಲಿಂಗ ಉತ್ಪತ್ಯವಾಗದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಲ್ಲಿದ್ದರೊ? ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಬ್ರಹ್ಮವಿಲ್ಲದಂದು ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮರೆಂಬ ಅಷ್ಟತನುಮೂರ್ತಿಗಳೆಲ್ಲಿದ್ದರೊ? ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮರೆಂಬ ಶಿವನ ಅಷ್ಟತನುಮೂರ್ತಿಗಳು ನೆಲೆಗೊಳ್ಳದಂದು ಅಖಂಡ ಲೋಕಾದಿಲೋಕಂಗಳು ಸಚರಾಚರಗಳೆಲ್ಲಿದ್ದುದೋ? ಅಪ್ರಮಾಣಕೂಡಲಸಂಗಮದೇವಾ, ನಿಮ್ಮ ನಿಲವ ಮಹಾನುಭಾವಸುಖಿ ಬಲ್ಲನು.